ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition

 Lip Plate Tradition
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿನ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Published on: 

Lip Plate Tradition: ಹೆಣ್ಣಿನ ಸೌಂದರ್ಯ ಅಂದಾಕ್ಷಣ ನಮಗೆಲ್ಲ ಮೊದಲಿಗೆ ನೆನಪಾಗೋದೇ ಆಕರ್ಷಕ ಮುಖ. ಆ ಅಂದವನ್ನು ದುಪ್ಪಟ್ಟಾಗಿಸುವುದು ಓಲೆ, ಹಣೆಬೊಟ್ಟು, ಮೂಗುತಿ ಸೇರಿದಂತೆ ಇನ್ನಿತರ ವಸ್ತುಗಳು. ಇನ್ನೂ ಕೆಲವರಿಗೆ, ಸುಂದರ ಕಣ್ಣುಗಳು, ಮತ್ತೊಂದಿಷ್ಟು ಜನರಿಗೆ ವಿಭಿನ್ನ ಉಡುಗೆ-ತೊಡುಗೆಗಳು. ಆದರೆ, ಜಗತ್ತಿನ ಪ್ರತಿಯೊಂದು ಭಾಗದಲ್ಲೂ ಸೌಂದರ್ಯಕ್ಕೆ ತನ್ನದೇ ಆದ ವ್ಯಾಖ್ಯಾನವಿದೆ ಎಂಬುದಕ್ಕೆ ಆಫ್ರಿಕಾದ ಇಥಿಯೋಪಿಯಾದಲ್ಲಿ ನಡೆಯುತ್ತಿರುವ ಈ ವಿಚಿತ್ರ ಸಂಪ್ರದಾಯವೇ ಒಂದು ಜ್ವಲಂತ ಸಾಕ್ಷಿ.

ಈ ಸಂಪ್ರದಾಯದ ಹಿಂದೆ

ಇಲ್ಲಿನ ಬುಡಕಟ್ಟು ಜನರಿಗೆ ಸೌಂದರ್ಯದ ಕಲ್ಪನೆ ಮಾತ್ರ ಕೊಂಚ ವಿಚಿತ್ರ ಹಾಗೂ ಅಚ್ಚರಿ ಮೂಡಿಸುವಂತಿದೆ. ಕಾರಣ, ಸಮುದಾಯಗಳ ಮಹಿಳೆಯರು ತಮ್ಮ ಕೆಳತುಟಿಯಲ್ಲಿ ದೊಡ್ಡ ರಂಧ್ರ ಮಾಡಿಸಿಕೊಂಡು, ಅದರಲ್ಲಿ ದುಂಡಗಿನ ತಟ್ಟೆಯಂತಹ ಆಭರಣ ಧರಿಸುತ್ತಾರೆ. ಹೊರಜಗತ್ತಿಗೆ ಅಚ್ಚರಿ ಎನಿಸುವ ಈ ಸಂಪ್ರದಾಯದ ಹಿಂದೆ ಅಡಗಿರುವ ಸಾಂಸ್ಕೃತಿಕ ನಂಬಿಕೆಗಳನ್ನು ಕೇಳಿದರೆ ಒಂದು ನಿಮಿಷ ಮೈಜುಮ್​ ಎನಿಸುತ್ತೆ ಹಾಗೂ ಹೀಗೂ ಉಂಟಾ? ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತದೆ.

ಮನುಕುಲದ ಜನನದಿಂದಲೂ ಸೌಂದರ್ಯದ ಪರಿಕಲ್ಪನೆಯು ಬಲವಾದ ಕಲ್ಪನೆಯಾಗಿಯೇ ಉಳಿದಿದೆ. ಜಾಗತಿಕವಾಗಿ ಜನರು ತಮ್ಮದೇ ಆದ ಸೌಂದರ್ಯದ ಬಯಕೆಗಳನ್ನು ಹೊಂದಿದ್ದಾರೆ. ಆದರೆ, ಆಫ್ರಿಕಾದ ಈ ಬುಡಕಟ್ಟು ಜನಾಂಗ ಮಾತ್ರ ಬಹಳ ವಿಚಿತ್ರ ಹಾಗೂ ಹಳೆಯ ಪದ್ದತಿಯನ್ನು ಇಂದಿಗೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಸೌಂದರ್ಯದ ಬಗ್ಗೆ ತೀರ ವಿಭಿನ್ನವಾದ ಪರಿಕಲ್ಪನೆ ಇದೆ. ಮಹಿಳೆಯರು ತಮ್ಮ ತುಟಿಗಳನ್ನು ಕತ್ತರಿಸಿಕೊಳ್ಳುತ್ತಾರೆ ಮತ್ತು ನಂತರ ಆ ತೂತು ಬಿದ್ದ ಸುತ್ತ ತಟ್ಟೆಗಳನ್ನು ಕಿವಿಗೆ ಓಲೆಯಂತೆ ಹಾಕಿಕೊಳ್ಳುತ್ತಾರೆ.

ಅತ್ಯಂತ ಹಳೆಯ ಸಂಪ್ರದಾಯ

ಒಬ್ಬರ ತುಟಿಗಳನ್ನು ಕತ್ತರಿಸುವುದು ಮತ್ತು ಅವುಗಳ ಮೇಲೆ ತಾವೇ ತಯಾರಿಸುವ ತಟ್ಟೆಗಳನ್ನು ಧರಿಸುವುದು ಇವರ ಅತ್ಯಂತ ಹಳೆಯ ಸಂಪ್ರದಾಯ. ಅಸಲಿಗೆ ಇದು ಅವರ ರೂಪವನ್ನು ಹೆಚ್ಚಿಸುತ್ತದೆ ಎಂಬುದು ಅವರಲ್ಲಿರುವ ಗಾಢವಾದ ನಂಬಿಕೆ. ಇದೊಂದು ನಂಬಿಕೆಯಾಗಿ ಮಾತ್ರ ಉಳಿಯದೆ, ಜನರಲ್ಲಿ ಆಳವಾದ ವಿಶ್ವಾಸ ಮತ್ತು ಪದ್ಧತಿಯನ್ನು ಬೇರೂರಿಸಿದೆ. ಅವರು ತಮ್ಮ ಪರಂಪರೆಯ ಬೇರುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

ಆಫ್ರಿಕಾದ ಸೂರಿ ಮತ್ತು ಮುರ್ಸಿ ಬುಡಕಟ್ಟುಗಳಲ್ಲಿ ಈ ಲಿಪ್ ಪ್ಲೇಟ್ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬರಲಾಗಿದೆ. ಸೂರಿ, ಮುರ್ಸಿ ಮತ್ತು ಸುರ್ಮಾ ಬುಡಕಟ್ಟು ಎಂದು ಕರೆಯಲ್ಪಡುವ ಎರಡು ಜನಾಂಗೀಯ ಗುಂಪುಗಳಾಗಿವೆ. ದಕ್ಷಿಣ ಇಥಿಯೋಪಿಯಾದ ಓಮೋ ಕಣಿವೆಯಲ್ಲಿರುವ ಸ್ಥಳೀಯ ಇಥಿಯೋಪಿಯನ್ ಬುಡಕಟ್ಟುಗಳಿವು. ಮುರ್ಸಿ ಬುಡಕಟ್ಟು ಸೂರಿ ಬುಡಕಟ್ಟಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಎರಡೂ ಬುಡಕಟ್ಟುಗಳು ಒಂದೇ ರೀತಿಯ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತವೆ. ಸಾಂಪ್ರದಾಯಿಕವಾಗಿ, ಎರಡೂ ಟ್ರೈಬಲ್​ ಮಹಿಳೆಯರು ತಮ್ಮ ತುಟಿಗಳ ಮೇಲೆ ಅಗಲವಾದ ಲಿಪ್ ಪ್ಲೇಟ್​ಗಳನ್ನು ಹಾಕಿಕೊಳ್ಳುತ್ತಾರೆ.

Also Read
ರಕ್ತ ಹರಿದು ಉಸಿರು ಚೆಲ್ಲುವವರೆಗೂ ಕುಣಿಸುತ್ತಿತ್ತು ಈ ಕಾಯಿಲೆ! ಕೋವಿಡ್​ಗಿಂತಲೂ ಮಹಾಮಾರಿ 1518ರ ಈ ಡ್ಯಾನ್ಸಿಂಗ್​ ಪ್ಲೇಗ್ | Dancing plague
 Lip Plate Tradition

ಎರಡೂ ಬುಡಕಟ್ಟುಗಳ ಹುಡುಗಿಯರು 15 ಅಥವಾ 16 ವರ್ಷ ವಯಸ್ಸಿನವರಾಗಿದ್ದಾಗ, ಅವರ ತಾಯಿ ಅಥವಾ ಹಳ್ಳಿಯ ಇತರ ಮಹಿಳೆಯರು ತಮ್ಮ ಕೆಳಗಿನ ತುಟಿಗಳನ್ನು ಕತ್ತರಿಸುತ್ತಾರೆ. ಇದಕ್ಕಾಗಿ ಚಾಕು ಅಥವಾ ಇತರ ಹರಿತವಾದ ಉಪಕರಣವನ್ನು ಬಳಸುತ್ತಾರೆ. ಕೆಳಗಿನ ತುಟಿಯನ್ನು ಕತ್ತರಿಸುವ ಮೊದಲು ಕನಿಷ್ಠ ಎರಡು ಹಲ್ಲುಗಳನ್ನು ಕಿತ್ತು ಹಾಕಲಾಗುತ್ತದೆ. ಕೆಳಗಿನ ತುಟಿಯಲ್ಲಿ ಅಂತರವನ್ನು ರಚಿಸುವ ರೀತಿಯಲ್ಲಿ ಕಟ್ ಮಾಡಲಾಗುತ್ತದೆ. ಈ ಅಂತರದ ಮೂಲಕ ಲಿಪ್ ಪ್ಲೇಟ್‌ಗಳನ್ನು ಜೋಡಿಸಲಾಗುತ್ತದೆ.

ಸಾಮಾನ್ಯವಾಗಿ 4 ಸೆಂ. ಮೀಟರ್​ ವ್ಯಾಸದ ಮೊದಲ ಪ್ಲೇಟ್ ಅನ್ನು ತುಟಿಗೆ ಸೇರಿಸುವವರೆಗೆ ಕತ್ತರಿಸಿದ ತುಟಿಗಳನ್ನು ಅಗಲ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಣ್ಣುಮಕ್ಕಳು ವಿಪರೀತ ನೋವನ್ನು ಸಹಿಸಿಕೊಳ್ಳಬೇಕಿದೆ. ತುಟಿಗಳ ಮೇಲಿನ ಗಾಯಗಳು ಗುಣವಾಗಲು ಸುಮಾರು ಎರಡು ವಾರಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕಡಿತವನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡಲು ಬುಡಕಟ್ಟುಗಳು ತಮ್ಮದೇ ಆದ ನೈಸರ್ಗಿಕ ಪುಡಿಗಳನ್ನು ಕೂಡ ಇಟ್ಟುಕೊಂಡಿದ್ದಾರೆ ಎಂಬುದು ಗಮನಾರ್ಹ.

8-20 ಸೆಂಟಿಮೀಟರ್ ಪ್ಲೇಟ್​

ತುಟಿ ವಾಸಿಯಾದ ನಂತರ, ಕೆಳಗಿನ ತುಟಿಯನ್ನು ಹಿಂದಕ್ಕೆ ಎಳೆಯಲಾಗುತ್ತದೆ. ಮೊದಲಿಗೆ, ಜೇಡಿಮಣ್ಣಿನಿಂದ ಮಾಡಿದ ವೃತ್ತಾಕಾರದ ಫಲಕಗಳನ್ನು ತುಟಿಗಳ ಮೇಲೆ ಧರಿಸಲಾಗುತ್ತದೆ. ಪ್ರತಿಯೊಬ್ಬ ಮಹಿಳೆ ತನ್ನದೇ ಆದ ಲಿಪ್ ಪ್ಲೇಟ್‌ಗಳನ್ನು ಹಾಕಿಕೊಳ್ಳಲಿದ್ದಾರೆ. ಅನೇಕ ಜನರು ತಮ್ಮದೇ ಆದ ಲಿಪ್ ಪ್ಲೇಟ್‌ಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಅವರ ಇಚ್ಛೆಯಂತೆ, ಆದ್ಯತೆಯಂತೆ ಅಲಂಕಾರಗಳೊಂದಿಗೆ ಹಾಕುತ್ತಾರೆ. ಮಹಿಳೆಯರು ಸುಮಾರು 8 ಸೆಂ.ಮೀನಿಂದ 20 ಸೆಂಟಿಮೀಟರ್ ಅಗಲದ ಲಿಪ್ ಪ್ಲೇಟ್‌ಗಳನ್ನು ಧರಿಸುತ್ತಾರೆ. ಇಲ್ಲಿ ಇಷ್ಟೇ ಗಾತ್ರ ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ. ಅದು ಆಯಾ ಮಹಿಳೆಗೆ ಬಿಟ್ಟದ್ದು,. ತಮಗೆ ಬೇಕಾದ ಗಾತ್ರವನ್ನು ಆಯ್ಕೆ ಮಾಡಬಹುದು.

ಗಾತ್ರದ ಮೇಲೆಯೇ ಡಬಲ್​ ವರದಕ್ಷಿಣೆ

ಮಹಿಳೆಯರು ಧರಿಸಿರುವ ಲಿಪ್ ಪ್ಲೇಟ್‌ಗಳ ಗಾತ್ರದ ಆಧಾರದ ಮೇಲೆಯೇ ವರದಕ್ಷಿಣೆ ಸ್ವೀಕಾರ ನಿರ್ಧಾರವಾಗಲಿದೆ. ಅಸಲಿಗೆ, ಭಾರತೀಯ ಸಂಪ್ರದಾಯದಲ್ಲಿ ವಧುವಿನ ಮನೆಯವರು ವರನಿಗೆ ವರದಕ್ಷಿಣೆ ಕೊಡುತ್ತಾರೆ. ಆದರೆ, ಇಲ್ಲಿನ ಬುಡಕಟ್ಟು ಸಂಪ್ರದಾಯದಲ್ಲಿ ಅದು ಕಂಪ್ಲೀಟ್​ ರಿವರ್ಸ್! ವರನು ಮಹಿಳೆಯ ಲಿಪ್ ಪ್ಲೇಟ್​ ಗಾತ್ರದ ಆಧಾರದ ಮೇಲೆ ವಧುವಿನ ತಂದೆಗೆ ಡೌರಿ ನೀಡುತ್ತಾನೆ. ಲಿಪ್ ಪ್ಲೇಟ್ ದೊಡ್ಡದಾಗಿದೆ ಎಂದರೆ ಹೆಚ್ಚು ಹಸುಗಳನ್ನು ಸಹ ನೀಡಲಿದ್ದಾನೆ.

ತುಟಿ ಹೀಗಿದ್ದರೆ ತಿಂಡಿ-ಊಟ ಹೇಗೆ?

ಮಾಹಿತಿಗಳ ಪ್ರಕಾರ, ತಿಂಡಿ-ಊಟ ಮತ್ತು ವಿಶೇಷ ಸಂದರ್ಭಗಳಲ್ಲಿ ಈ ಪ್ಲೇಟ್‌ಗಳನ್ನು ತೆಗೆದುಹಾಕಲಾಗುತ್ತದೆ. ಸೂರಿ ಮುರ್ಸಿ ಬುಡಕಟ್ಟಿನ ಪುರುಷರಿಗೆ, ಲಿಪ್ ಪ್ಲೇಟ್‌ಗಳು ಮಹಿಳೆಯರನ್ನು ಹೆಚ್ಚು ಆಕರ್ಷಕ ಅನಿಸುತ್ತದೆ ಎಂಬುದು ಮಾತು. ಲಿಪ್ ಪ್ಲೇಟ್‌ಗಳನ್ನು ವಯಸ್ಸಾದ ವಿವಾಹಿತ ಮಹಿಳೆಯರಿಗಿಂತ ಯುವತಿಯರು ಮತ್ತು ನವವಿವಾಹಿತರು ಹೆಚ್ಚು ಧರಿಸುತ್ತಾರೆ. ಎಲ್ಲ ಮಹಿಳೆಯರು ಎಲ್ಲ ಸಮಯದಲ್ಲೂ ಲಿಪ್ ಪ್ಲೇಟ್‌ಗಳನ್ನು ಧರಿಸುವುದಿಲ್ಲ.

Also Read
ಶುಕ್ರವಾರವೇ ಸಿನಿಮಾಗಳು ರಿಲೀಸ್​ ಆಗುವುದೇಕೆ? ಚಿತ್ರೋದ್ಯಮದ ಈ ಲಾಜಿಕ್​ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್​ ಸ್ಟೋರಿ | Friday Release
 Lip Plate Tradition

ಅಡುಗೆ ಮಾಡುವಾಗ ಮತ್ತು ತಿನ್ನುವಾಗ ಅವುಗಳನ್ನು ತೆಗೆದಿಡುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ಗಂಡಂದಿರಿಗೆ ಆಹಾರವನ್ನು ಬಡಿಸುವಾಗ ಮತ್ತು ಹಳ್ಳಿಯಲ್ಲಿ ಇತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸುತ್ತಾರೆ. ಆದಾಗ್ಯೂ, ಒಬ್ಬ ಮಹಿಳೆ ವಿಧವೆಯಾದಾಗ, ಆಕೆಯ ಬಾಹ್ಯ ಸೌಂದರ್ಯವು ಅವಳ ಮೃತ ಪತಿಯೊಂದಿಗೆ ಕಣ್ಮರೆಯಾಗುತ್ತದೆ ಎಂಬುದು ನಂಬಿಕೆ. ಆದ್ದರಿಂದ, ವಿಧವೆಯರು ತಮ್ಮ ತುಟಿಗೆ ಹಾಕಿರುವ ಪ್ಲೇಟ್​ಗಳನ್ನು ತೆಗೆದುಹಾಕುತ್ತಾರೆ,(ಏಜೆನ್ಸೀಸ್).