ಯುಜಿಸಿ ಹೊಸ ನಿಯಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ನಮಗೆ ಸಮಾನತೆ ಬೇಕು, ತಾರತಮ್ಯವಲ್ಲ ಎಂದು ಬೃಹತ್ ಪ್ರತಿಭಟನೆ | UGC Protest

ಯುಜಿಸಿ ಹೊಸ ನಿಯಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ನಮಗೆ ಸಮಾನತೆ ಬೇಕು, ತಾರತಮ್ಯವಲ್ಲ ಎಂದು ಬೃಹತ್ ಪ್ರತಿಭಟನೆ | UGC Protest
ಯುಜಿಸಿ ಹೊಸ ನಿಯಮದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ: ನಮಗೆ ಸಮಾನತೆ ಬೇಕು, ತಾರತಮ್ಯವಲ್ಲ ಎಂದು ಬೃಹತ್ ಪ್ರತಿಭಟನೆ | UGC Protest
Published on
ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC Protest) ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಮಾರ್ಗಸೂಚಿಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿವೆ. ಈ ನಿಯಮಗಳು ಕೇವಲ ಕೆಲವು ನಿರ್ದಿಷ್ಟ ವರ್ಗಗಳಿಗೆ ಮಾತ್ರ ಪ್ರಯೋಜನಕಾರಿಯಾಗಿವೆ ಮತ್ತು ಉಳಿದವರಿಗೆ ತಾರತಮ್ಯ ಮಾಡುತ್ತಿವೆ ಎಂದು ಆರೋಪಿಸಿ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಗೆ ಕಾರಣವಾದ ಆ ವಿವಾದಾತ್ಮಕ ನಿಯಮಗಳು:
ಯುಜಿಸಿಯ ಹೊಸ ನಿಯಮದ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಮತ್ತು ಪ್ರವೇಶಾತಿ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪ್ರಮುಖ ಆಕ್ಷೇಪಣೆಗಳೆಂದರೆ

ತಾರತಮ್ಯದ ಸಂಕೇಚಿತ ವ್ಯಾಖ್ಯಾನ

ಹೊಸ ನಿಯಮದ ಪ್ರಕಾರ, ಜಾತಿ ಆಧಾರಿತ ತಾರತಮ್ಯ ಎಂದರೆ ಕೇವಲ SC, ST ಮತ್ತು OBC ಸಮುದಾಯಗಳ ವಿರುದ್ಧ ನಡೆಯುವ ತಾರತಮ್ಯ ಮಾತ್ರ ಎಂದು ವ್ಯಾಖ್ಯಾನಿಸಲಾಗಿದೆ. ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳನ್ನು ಈ ರಕ್ಷಣಾ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಸಾಮಾನ್ಯ ವರ್ಗದವರೂ ಕೂಡ ತಾರತಮ್ಯಕ್ಕೆ ಒಳಗಾಗಬಹುದು, ಆದರೆ ಅವರಿಗೆ ಈ ಕಾಯ್ದೆಯಡಿ ದೂರು ನೀಡಲು ಅವಕಾಶವಿಲ್ಲ ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.

ಸುಳ್ಳು ದೂರುಗಳ ಭಯ ಮತ್ತು ಪುರಾವೆಯ ಹೊರೆ:

ಈ ನಿಯಮಗಳು ದೂರುದಾರರಿಗೆ ಹೆಚ್ಚಿನ ಒತ್ತು ನೀಡುತ್ತವೆ ಮತ್ತು ಆರೋಪಿತರ ಮೇಲೆ ತಪ್ಪಿತಸ್ಥ ಎಂಬ ಹಣೆಪಟ್ಟಿಯನ್ನು ಬೇಗನೆ ಹಚ್ಚುತ್ತವೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ. ಸುಳ್ಳು ಅಥವಾ ದುರುದ್ದೇಶಪೂರಿತ ದೂರುಗಳನ್ನು ನೀಡುವವರ ವಿರುದ್ಧ ಯಾವುದೇ ದಂಡದ ನಿಬಂಧನೆಗಳು ಇಲ್ಲದಿರುವುದು ಶೈಕ್ಷಣಿಕ ಸಂಸ್ಥೆಗಳಲ್ಲಿ ಭಯದ ವಾತಾವರಣ ನಿರ್ಮಿಸಬಹುದು ಎಂಬ ಆತಂಕವಿದೆ.

ಇಕ್ವಿಟಿ ಸ್ಕ್ವಾಡ್ ಮತ್ತು ನಿರಂತರ ಕಣ್ಗಾವಲು

ಕ್ಯಾಂಪಸ್‌ಗಳಲ್ಲಿ ತಾರತಮ್ಯ ತಡೆಯಲು ಇಕ್ವಿಟಿ ಸ್ಕ್ವಾಡ್‌ಗಳನ್ನು ರಚಿಸಬೇಕು ಎಂದು ನಿಯಮ ಹೇಳುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ಸದಾ ಕಣ್ಗಾವಲು ಇರಿಸಿದಂತೆ ಇರುತ್ತದೆ ಮತ್ತು ಕ್ಯಾಂಪಸ್‌ನ ಮುಕ್ತ ವಾತಾವರಣಕ್ಕೆ ಧಕ್ಕೆ ತರುತ್ತದೆ ಎಂಬುದು ವಿದ್ಯಾರ್ಥಿ ಸಂಘಟನೆಗಳ ಆರೋಪವಾಗಿದೆ.

ಕಠಿಣ ಶಿಕ್ಷೆ ಮತ್ತು ಕಾಲಮಿತಿ

ಯಾವುದೇ ದೂರು ದಾಖಲಾದ 24 ಗಂಟೆಗಳೊಳಗೆ ಸಮಿತಿ ಸಭೆ ಸೇರಬೇಕು ಮತ್ತು 15 ದಿನಗಳಲ್ಲಿ ತನಿಖೆ ಮುಗಿಸಬೇಕು ಎಂಬ ಕಠಿಣ ನಿಯಮವಿದೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಮಾನತು, ಉಚ್ಚಾಟನೆ ಅಥವಾ ಪೊಲೀಸ್ ಕ್ರಮದಂತಹ ಶಿಕ್ಷೆಗಳಿವೆ. ಸಮರ್ಪಕ ತನಿಖೆಯಿಲ್ಲದೆ ಅವಸರದ ನಿರ್ಧಾರಗಳು ಅಮಾಯಕರ ಬದುಕನ್ನು ಹಾಳುಮಾಡಬಹುದು ಎಂಬುದು ಟೀಕಾಕಾರರ ವಾದವಾಗಿದೆ.

ಸಮಿತಿಯಲ್ಲಿ ಪ್ರಾತಿನಿಧ್ಯದ ಕೊರತೆ

ದೂರುಗಳನ್ನು ವಿಚಾರಣೆ ನಡೆಸುವ ಇಕ್ವಿಟಿ ಸಮಿತಿಯಲ್ಲಿ ಸಾಮಾನ್ಯ ವರ್ಗದ ಪ್ರತಿನಿಧಿಗಳಿಗೆ ಕಡ್ಡಾಯ ಸ್ಥಾನವಿಲ್ಲ. ಕೇವಲ ಮೀಸಲಾತಿ ವರ್ಗದವರು ಮತ್ತು ಮಹಿಳೆಯರಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ, ಇದು ಏಕಪಕ್ಷೀಯ ತೀರ್ಪಿಗೆ ದಾರಿ ಮಾಡಿಕೊಡಬಹುದು ಎಂಬ ಅಸಮಾಧಾನವಿದೆ.

ಯುಜಿಸಿ ಹೊಸ ನಿಯಮದಲ್ಲಿ ಏನಿದೆ..?

ಒಬಿಸಿ (OBC) ವರ್ಗದ ಸೇರ್ಪಡೆ: ಈ ಬಾರಿಯ ಅತ್ಯಂತ ದೊಡ್ಡ ಬದಲಾವಣೆ ಎಂದರೆ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳ ಜೊತೆಗೆ ಈಗ ಇತರೆ ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕೂಡ ತಾರತಮ್ಯದ ವಿರುದ್ಧದ ರಕ್ಷಣಾ ವ್ಯಾಪ್ತಿಗೆ ತರಲಾಗಿದೆ.

ಸಮಾನ ಅವಕಾಶ ಕೇಂದ್ರ: ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾಲಯವು ಕಡ್ಡಾಯವಾಗಿ ಈ ಕೇಂದ್ರವನ್ನು ಸ್ಥಾಪಿಸಬೇಕು. ಇದು ತಾರತಮ್ಯದ ದೂರುಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಈಕ್ವಿಟಿ ಸಮಿತಿ: ಪ್ರತಿ ಸಂಸ್ಥೆಯಲ್ಲಿ ಸಂಸ್ಥೆಯ ಮುಖ್ಯಸ್ಥರ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ಇರಬೇಕು. ಇದರಲ್ಲಿ SC, ST, OBC, ಮಹಿಳೆಯರು ಮತ್ತು ಅಂಗವಿಕಲರಿಗೆ ಕಡ್ಡಾಯ ಪ್ರಾತಿನಿಧ್ಯ ಇರಬೇಕು.

ಈಕ್ವಿಟಿ ಸ್ಕ್ವಾಡ್‌ಗಳು: ಕ್ಯಾಂಪಸ್‌ಗಳಲ್ಲಿ ತಾರತಮ್ಯ ನಡೆಯದಂತೆ ನಿಗಾ ಇಡಲು ಮತ್ತು ತಕ್ಷಣದ ಪ್ರತಿಕ್ರಿಯೆ ನೀಡಲು ಈ ತಂಡಗಳು ಸದಾ ಕಾರ್ಯನಿರ್ವಹಿಸುತ್ತಿರಬೇಕು.

ಸಮಯ ಮಿತಿ ಮತ್ತು ಕಟ್ಟುನಿಟ್ಟಿನ ಕ್ರಮ:

ದೂರು ಬಂದ 24 ಗಂಟೆಗಳೊಳಗೆ ಈಕ್ವಿಟಿ ಸಮಿತಿ ಸಭೆ ಸೇರಬೇಕು.

ದೂರಿನ ತನಿಖಾ ವರದಿಯನ್ನು 15 ಕೆಲಸದ ದಿನಗಳೊಳಗೆ ಸಲ್ಲಿಸಬೇಕು.

ಸಂಸ್ಥೆಯ ಮುಖ್ಯಸ್ಥರು 7 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು.

24/7 ಸಹಾಯವಾಣಿ: ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ದೂರು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಮತ್ತು ಆನ್‌ಲೈನ್ ಪೋರ್ಟಲ್ ಇರಬೇಕು.

ಸಂಸ್ಥೆಗಳ ಮೇಲೆ ದಂಡ: ನಿಯಮ ಉಲ್ಲಂಘಿಸುವ ಕಾಲೇಜುಗಳಿಗೆ ಯುಜಿಸಿ ಅನುದಾನ ಕಡಿತ, ಮಾನ್ಯತೆ ರದ್ದು ಅಥವಾ ಕೋರ್ಸ್‌ಗಳನ್ನು ನಡೆಸದಂತೆ ನಿಷೇಧ ಹೇರುವ ಅಧಿಕಾರವನ್ನು ಯುಜಿಸಿ ಹೊಂದಿದೆ.

ಬೀದಿಗಿಳಿದ ವಿದ್ಯಾರ್ಥಿ ಸಮೂಹ

ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು, ಯುಜಿಸಿ ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಿಕ್ಷಣವು ಎಲ್ಲರ ಹಕ್ಕು, ಅದು ಕೆಲವರ ಸೊತ್ತಾಗಬಾರದು ಎಂಬ ಫಲಕಗಳನ್ನು ಹಿಡಿದು ಶಾಂತಿಯುತವಾಗಿ ಪ್ರತಿಭಟಿಸಿದರು. ಬೆಂಗಳೂರು, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲೂ ವಿದ್ಯಾರ್ಥಿ ಸಂಘಟನೆಗಳು ಈ ನಿಯಮಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.

ಯುಜಿಸಿ ಸಮರ್ಥನೆ ಏನು..?

ವಿವಾದದ ನಡುವೆ ಪ್ರತಿಕ್ರಿಯಿಸಿರುವ ಯುಜಿಸಿ ಅಧಿಕಾರಿಗಳು, ಈ ನಿಯಮಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ತರಲಾಗಿದ್ದು, ಇದು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಸಮರ್ಥನೆಯನ್ನು ವಿದ್ಯಾರ್ಥಿಗಳು ಒಪ್ಪಲು ಸಿದ್ಧರಿಲ್ಲ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net