

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತಂತೆ ಬಿಜೆಪಿಯೇ ಅದನ್ನು ಮಾಡಿಸಿದ್ದು ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಪಕ್ಷದಲ್ಲಿನ ಅಗ್ಗಜಗ್ಗಾಟದಿಂದಲೇ ಸ್ಟಿಂಗ್ ಆಪರೇಷನ್ ನಡೆದಿದ್ದು, ಅವರೇ ಸಿಲುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿರುವ ಅವರು, ಸ್ಟಿಂಗ್, ಡಿಂಗ್ ಎಲ್ಲದರಲ್ಲೂ ತಗಲಾಕಿಕೊಂಡಿರೋದು ಕಾಂಗ್ರೆಸ್ನವರು. ಒಂದು ಅಂತು ನಿಜಾ ಕ್ಯಾಬಿನೆಟ್ ಸಚಿವರು ಆತಂಕದಲ್ಲಿರೋದಂತು ಸತ್ಯ. ಇದರಿಂದ ಅವರು ಹೊರಗೆ ಬರಲಿ. ರವಿ ಗಣಿಗ ಹೇಳಿಕೆ ನೋಡಿದೆ, ಅವರ ಗುರುಗಳೇ ಸಿಕ್ಕಿಹಾಕಿಕೊಂಡಿರುವ ಆತಂಕವಿದೆ. ಸರ್ಕಾರವಿದೆ, ತನಿಖೆ ಮಾಡಿಸಲಿ ಎಂದಿದ್ದಾರೆ.
ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಮೀಸಲಾತಿ ಪ್ರಕಟವಾಗಿದೆ. ಇನ್ನಾದ್ರೂ ಸರ್ಕಾರ ಕಾರಣ ಹೇಳದೇ ಚುನಾವಣೆ ನಡೆಸಬೇಕು. ನಾವು ಚುನಾವಣೆಗೆ ತಯಾರಾಗಿದ್ದೇವೆ. ಇನ್ನೂ ಆಡಳಿತ ಪಕ್ಷಕ್ಕೆ ಅನುಕೂಲ ಆಗುವಂತೆಯೂ ಮೀಸಲಾತಿ ಮಾಡಿದ್ದಾರೆ. ಜೊತೆಗೆ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಎಲ್ಲವನ್ನೂ ಮುಂದೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕೋರ್ ಕಮಿಟಿಯಲ್ಲಿ ಕೆಲವರನ್ನ ಸೇರಿಸೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿವೈವಿ, ಕಮಿಟಿಗೆ ಕೆಲ ಹೆಸರು ಸೇರಿಸಲು ನಮ್ಮ ಅಭಿಪ್ರಾಯ ಇದೆ. ಆದ್ರೆ ಸೇರಿಸೋದು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರ. ಅವರು ಶೀಘ್ರದಲ್ಲೇ ಕೆಲವರನ್ನ ಸೇರ್ಪಡೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಕೊನೆಯದಾಗಿ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ರಾಜ್ಯದ ಸಹ ಉಸ್ತುವಾರಿಯಾದ ಕಾಸಂ ವೇಕಟೇಶ್ವರುಲು ನೇತೃತ್ವದಲ್ಲಿ ಸಭೆ ನಡೆದಿದೆ. ಕಾಂಗ್ರೆಸ್ ಎಸ್ಐಆರ್ ಪ್ರಕ್ರಿಯೆಯಲ್ಲಿ ಫಾರಂ 7 ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿ ಬಿಜೆಪಿ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕ್ತಿದ್ದಾರೆ. ಈ ವಿಚಾರಕ್ಕೆ ಕೋರ್ಟ್ ಚೀಮಾರಿ ಹಾಕಿದೆ. ಇದೇ ರೀತಿ ಮುಂದುವರೆದ್ರೆ ಪೊಲೀಸ್ & ಎಸ್ಪಿ ಕಚೇರಿ ಮುತ್ತಿಗೆ ಹಾಕಬೇಕು ಅಂತ ತೀರ್ಮಾನ ಮಾಡಿದ್ದೇವೆ. ಎಂದು ಹೇಳಿದ್ದಾರೆ.
ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡುವ ಅಧಿಕಾರ ಪಿಡಿಒಗೆ ಕೊಟ್ಟಿದ್ದಾರೆ. ಇದನ್ನ ವಾಪಸ್ ಪಡೆಯಬೇಕು. ಹಿರಿಯೂರು ಕ್ಷೇತ್ರ ಉಪಚುನಾವಣೆ ಯಾವುದೇ ಕ್ಷಣದಲ್ಲೂ ಘೋಷಣೆಯಾಗಬಹುದು. ನಾವು ಜೆಡಿಎಸ್ ಅನ್ನು ವಿಶ್ವಾಸಕ್ಕೆ ಪಡೆದು, ನಮ್ಮ ಅಭ್ಯರ್ಥಿ ಹಾಕಬೇಕು ಎಂದು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.