

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಅವರು ಪದೇ ಪದೇ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ಮಾಡಲಾಗ್ತಿದೆ. ಯಾರೋ ಸಿಲುಕಿದ್ದಾರೆ ಎಂದು ಹೇಳುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ, ಸಿಎಂ ಹೆಸರು ಬಹಿರಂಗಡಿಸಲಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಜನರ ದೃಷ್ಟಿಯಲ್ಲಿ ಇಡೀ ಕ್ಯಾಬಿನೆಟ್ ಮಲೀನ ಆಗಿದೆ. ಯಾರೋ ಸಿಲುಕಿದ್ದಾರೆ ಅಂತ ಮಾತಾಡ್ತಿದ್ದಾರೆ. ಸಚಿವರು, ಶಾಸಕರು ಭಯದಲ್ಲೇ ಇರಬೇಕಾ? ಸಿಎಂ ಗಾಳಿಯಲ್ಲಿ ಗುಂಡು ಹೊಡೆಯೋದು ಬಿಟ್ಟು, ಸ್ಟಿಂಗ್ ಆಪರೇಷನ್ ಮಾಡಿದ ಆರೋಪಿ ವಿರುದ್ಧ ಎಫ್ಐಆರ್ ಹಾಕಿಸಲಿ ಎಂದು ಒತ್ತಾಯಿಸಿದ್ದಾರೆ.
ಇದು ರಾಜ್ಯದ ಕ್ಯಾಬಿನೆಟ್ ವಿಚಾರ. ಬಯಲಿಗೆ ಬರಬೇಕು, ಸುಮ್ಮನೆ ಬಿಜೆಪಿ, ಜೆಡಿಎಸ್ ಅಂತ ಆರೋಪ ಮಾಡೋದು ನಿಲ್ಲಬೇಕು. ಅಭಿವೃದ್ಧಿ ಮಾಡ್ತಿದ್ದೀನಿ ಹೇಳುತ್ತಿದ್ದೀರಿ. ಇಂತಹದ್ದನ್ನು ಹೊರ ಹಾಕಲಿಲ್ಲ ಅಂದ್ರೆ ಡಿಕೆಶಿ ಅಂದ್ರೆ ಗಾಳಿಯಲ್ಲಿ ಗುಂಡು ಹೊಡೆಯೋದು ಅಂತಾಗಲಿದೆ ಎಂದಿದ್ದಾರೆ.
ಸಿದ್ದರಾಮಯ್ಯನವರ ಮೇಲೆ ಸ್ಟಿಂಗ್ ಆಪರೇಷನ್ ಮಾಡಿ ರಾಜೀನಾಮೆ ಪಡೆಯಲಾಗಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಅಶೋಕ್, ಪಾಪ ಸಿದ್ದರಾಮಯ್ಯ ಅವರು. ಅವರ ಅಧಿಕಾರ ಹೋದ ಮೇಲೆ ಮೌನವಾಗಿದ್ದಾರೆ. ಸದನದಲ್ಲಿ ಏಳೆಂಟು ದಿನ ಬಂದು ಕುಳಿತು ಹೋಗಿದ್ದಾರೆ. ಅವರಿಗೆ ಗರ ಬಡಿದಿದೆ. ಹಲವು ಸಮುದಾಯಗಳು ಗೌರವ ಇಟ್ಟಿದ್ದು, ಈ ವಿಚಾರದ ಬಗ್ಗೆ ಅವರು ಮಾತಾಡಬೇಕು ಎಂದು ಹೇಳಿದ್ದಾರೆ.