

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್, ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಕೃಪಾ ಆಳ್ವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ.
ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ ಹೊರಡಿಸಿದ ಉಚ್ಚಾಟನಾ ಆದೇಶದಲ್ಲಿ, ಸ್ಟಿಂಗ್ ಆಪರೇಷನ್ ಆರೋಪವು ಮಾಧ್ಯಮಗಳಲ್ಲಿನ ನಕಾರಾತ್ಮಕ ಪ್ರಚಾರ ಮತ್ತು ಪ್ರತಿಕ್ರಿಯೆಗಳಿಂದಾಗಿ ಪಕ್ಷಕ್ಕೆ ಮುಜುಗರವನ್ನುಂಟುಮಾಡಿದೆ. ಈ ಕಾರ್ಯಾಚರಣೆ ಪ್ರಕರಣದಲ್ಲಿ ನಿಮ್ಮ ಹೆಸರು ಸೇರ್ಪಡೆಯಾಗಿರುವುದರಿಂದ ಮತ್ತು ಈ ವಿಷಯದಲ್ಲಿ ನಿಮ್ಮ ನಡವಳಿಕೆಯು ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಾರಣವಾಗಿರುವುದರಿಂದ, ಗೌರವಾನ್ವಿತ ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ನಿಮ್ಮನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ ಎಂದು ತಿಳಿಸಲಾಗಿದೆ.
ಘಟನೆಯಲ್ಲಿ ಆಳ್ವಾ ಅವರ ಕೈವಾಡದ ಆರೋಪದ ಕುರಿತು ವಿವರಣೆ ಕೋರಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಆದರೆ ಅವರು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಅಥವಾ ವಿವರಣೆಯನ್ನು ಸಲ್ಲಿಸಿಲ್ಲ ಎನ್ನಲಾಗಿದೆ.
ಇನ್ನೂ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು, ತಮ್ಮ ವಿರುದ್ಧ ಯಾವುದೇ ಮಾನಹಾನಿಕಾರಕ ವಿಷಯ ಮತ್ತು ವಿಡಿಯೋವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದರು. ಇನ್ನೂ ತನಿಖೆ ನಡೆಸಿದ್ದ ಬೆಂಗಳೂರು ಸಿಸಿಬಿ ಪೊಲೀಸರು, ಸ್ಟಿಂಗ್ ಆಪರೇಷನ್ ಎನ್ನುವುದು ಕಟ್ಟುಕತೆ, ಉದ್ದೇಶಪೂರ್ವಕವಾಗಿ ಅದನ್ನು ಮಾಡಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದರು (ಏಜೆನ್ಸೀಸ್).