

ಶ್ರೀನಗರ: ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಇಂಡಿಯಾ ಕೂಟದ ಸರ್ಕಾರದಲ್ಲಿ ಬಂಡಾಯದ ಮುನ್ಸೂಚನೆ ಕೇಳಿ ಬಂದಿದ್ದು, ಸಚಿವ ಸಂಪುಟ ಬೆನ್ನಲ್ಲೇ 24 ಶಾಸಕರು ಶುಕ್ರವಾರ(ಅ. 30) ಪ್ರತ್ಯೇಕವಾಗಿ ಸುಧೀರ್ಘ ಕಾಲ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕನಿಷ್ಠ 18 ಅತೃಪ್ತ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶಾಸಕರ ಗುಂಪು, ಶುಕ್ರವಾರ ಸಂಜೆ ಶ್ರೀನಗರದಲ್ಲಿ ಸಭೆ ಸೇರಿದ್ದು, ಇತರ ಆರು ಶಾಸಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು ಎನ್ನಲಾಗಿದೆ. ಇತ್ತೀಚಿನ ಸಚಿವ ಸಂಪುಟ ಪುನರ್ರಚನೆಗೆ ಸರ್ಕಾರ ಅಳವಡಿಸಿಕೊಂಡ ಮಾನದಂಡಗಳಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕೋರಿ ಪಕ್ಷದಲ್ಲಿ ಸುಧಾರಣೆಗಾಗಿ ಹೋರಾಡುವುದಾಗಿ ಶಾಸಕರು ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.
ಎನ್‌ಸಿ ಶಾಸಕ ಕೈಸರ್ ಜಮ್ಶಿದ್ ಲೋನ್ ಅವರ ನಿವಾಸದಲ್ಲಿ ಈ ಸಭೆ ನಡೆದಿದೆ. ಮುಖ್ಯಮಂತ್ರಿಯವರ ಸಲಹೆಗಾರರಾಗಿರುವ ನಾಸಿರ್ ಅಸ್ಲಾಂ ವಾನಿ ಅವರನ್ನು ಆ ಹುದ್ದೆಯಿಂದ ತೆಗೆದುಹಾಕಬೇಕು. ಮತ್ತು ಡಿಸಿಎಂ ಸುರಿಂದರ್ ಚೌಧರಿ ಸೇರಿದಂತೆ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸುವ ನಿರ್ಣಯವೊಂದಕ್ಕೆ ಶಾಸಕರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾತನಾಡಿರುವ ಶಾಸಕರೊಬ್ಬರು, ನಮ್ಮ ಬೇಡಿಕೆಗಳನ್ನು ತಿಳಿಸಲು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬಯಸುತ್ತೇವೆ. ನಾವು ಪಕ್ಷದ ವಿರುದ್ಧ ಇಲ್ಲ, ಆದರೆ ಈಗ ಇರುವಂತೆ ಎಲ್ಲವೂ ಮುಂದುವರೆಯಲು ಸಾಧ್ಯವಿಲ್ಲ. ಸಿಎಂ ನಮ್ಮ ಮಾತುಗಳನ್ನು ಆಲಿಸಬೇಕು. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಎಂದಿದ್ದಾರೆ.
90 ಸದಸ್ಯ ಬಲದ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 41 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ನ ಆರು ಶಾಸಕರು, ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲದೊಂದಿಗೆ ಓಮರ್ ಅಬ್ದುಲ್ಲಾ ಅವರು ಸರ್ಕಾರ ರಚಿಸಿದ್ದಾರೆ. ಪ್ರಸ್ತುತ ಪ್ರತ್ಯೇಕ ಸಭೆ ನಡೆಸಿರುವ 24 ಶಾಸಕರು ಬಂಡಾಯ ಬಾವುಟ ಹಾರಿಸಿದ್ರೆ, ಸರ್ಕಾರಕ್ಕೆ ಸಂಕಷ್ಟ ಎದುರಾಗಬಹುದು ಎನ್ನಲಾಗಿದೆ (ಏಜೆನ್ಸೀಸ್).