

ವಾಷಿಂಗ್ಟನ್: ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಸಂವಹನ ಸಮಸ್ಯೆಗಳು ಉಂಟಾದ ಹಿನ್ನೆಲೆಯಲ್ಲಿ, ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶಾದ್ಯಂತ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಎಫ್‌ಎಎ, ಅಸಾಧಾರಣ ಸನ್ನಿವೇಶಗಳು ಮತ್ತು ಸುರಕ್ಷತೆಯ ಕಾರಣಗಳಿಂದಾಗಿ ಶುಕ್ರವಾರ ಮಧ್ಯಾಹ್ನ (ಸ್ಥಳೀಯ ಸಮಯ) ದೇಶಾದ್ಯಂತ ವಿಮಾನ ಹಾರಾಟಗಳನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದೆ.
ಇದರಿಂದ ಸುಮಾರು 11 ಸಾವಿರ ವಿಮಾನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ. ದೇಶದ 22 ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆ ತಲೆದೋರಿದ್ದು, ಅಂತರಾಷ್ಟ್ರೀಯ ವಿಮಾನಗಳು ಸಹ ಸ್ಥಗಿತಗೊಂಡಿವೆ. ಪರಿಣಾಮ ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿದೆ.
ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ, ದೇಶಾದ್ಯಂತ ವಿಮಾನಗಳ ಹಾರಾಟವನ್ನು ತಡೆಹಿಡಿಯುವ ನಿರ್ಧಾರಕ್ಕೆ ಅಸಾಧಾರಣ ಸನ್ನಿವೇಶ ಮತ್ತು ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಎಫ್‌ಎಎ ಒಂದು ಸಲಹಾ ಸೂಚನೆಯನ್ನು ಹೊರಡಿಸಿತ್ತು. ಈ ನಿರ್ಧಾರವನ್ನು ಒಂದು ಅಸಾಮಾನ್ಯ ಮತ್ತು ಅಪರೂಪದ ಕ್ರಮ ಎಂದು ಬಣ್ಣಿಸಲಾಗಿದೆ.
ಮುಂದಿನ ಸೂಚನೆ ಬರುವವರೆಗೂ ಹೊರಹೋಗುವ ವಿಮಾನಗಳನ್ನು ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿರ್ವಾಹಕರಿಗೆ ಈ ಸಲಹಾ ಸೂಚನೆಯಲ್ಲಿ ತಿಳಿಸಲಾಗಿದೆ. ಮತ್ತು ಒಳಬರುವ ಅಂತರರಾಷ್ಟ್ರೀಯ ವಿಮಾನಗಳ ವಿಷಯದಲ್ಲಿ, ಆಯಾ ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಇನ್ನೂ ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ಎಕ್ಸ್ನಲ್ಲಿ, ಈ ಸಮಸ್ಯೆಯನ್ನು ವಾಯುಯಾನ ನಿಯಂತ್ರಕ ಸಂಸ್ಥೆಯು ಪರಿಶೀಲಿಸುತ್ತಿದೆ. FAA ತಂತ್ರಜ್ಞರು ಈ ಸಮಸ್ಯೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ವಾಯುಯಾನದಲ್ಲಿದ್ದ ವಿಮಾನಗಳು ನೆಲದ ನಿಲುಗಡೆಯ ಹೊರತಾಗಿಯೂ ಕಾರ್ಯಾಚರಣೆಯನ್ನು ಮುಂದುವರಿಸುತ್ತವೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿವೆ.
ಯುನೈಟೆಡ್ ಏರ್‌ಲೈನ್ಸ್ ತನ್ನ ದೇಶೀಯ ವಿಮಾನಗಳು ಅಡಚಣೆಯ ಸಮಯದಲ್ಲಿ ಹೊರಡುವುದಿಲ್ಲವಾದರೂ, FAA ನಿರ್ದೇಶನಗಳ ಅಡಿಯಲ್ಲಿ ಅಂತರರಾಷ್ಟ್ರೀಯ ನಿರ್ಗಮನಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದು ಎಂದು ಹೇಳಿದೆ (ಏಜೆನ್ಸೀಸ್).