

| ಅಶೋಕ ನೀಮಕರ್ ಬಳ್ಳಾರಿ
ಕರೊನಾ ಸಂದರ್ಭ ಮತ್ತು ನಂತರ ಬೆಳವಣಿಗೆಗಳಿಂದ ಗುಣಮಟ್ಟ ಹಾಗೂ ರುಚಿಗೆ ಖ್ಯಾತಿ ಪಡೆದ ಸೋನಾ ಮಸೂರಿ ಭತ್ತಕ್ಕೆ ಬೆಲೆ ಇಲ್ಲದಂತಾಗಿದ್ದು, ರೈತರ ಜತೆಗೆ ಅಕ್ಕಿ ಗಿರಣಿಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತಕ್ಕೆ ಸರಿಸಾಟಿ ಇಲ್ಲ. ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಭತ್ತದ ಬೆಲೆಯೂ ಹೆಚ್ಚು. ಆದರೆ, ಕಳೆದ ಬೇಸಿಗೆ ಫಸಲು ಬಂದಾಗ ಇಳಿಕೆಯಾಗಿದ್ದ ಭತ್ತದ ಧಾರಣೆಯಲ್ಲಿ ಇನ್ನೂ ಸುಧಾರಣೆ ಕಂಡುಬಂದಿಲ್ಲ. ಕರೊನಾ ಕಾರಣಕ್ಕೆ ವಿದೇಶಕ್ಕೆ ಅಕ್ಕಿ ರಫ್ತು ಸ್ಥಗಿತವಾಗಿದ್ದು, ಸ್ಥಳೀಯವಾಗಿ ಸರ್ಕಾರ ಪಡಿತರ ಚೀಟಿದಾರರಿಗೆ ಅಕ್ಕಿ ಹಂಚಿಕೆ ಮಾಡಿದ್ದು ಮಾರುಕಟ್ಟೆ ಬೆಲೆ ಮೇಲೆ ಪರಿಣಾಮ ಬೀರಿದೆ.
ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಭತ್ತದ ಬೆಲೆ 1800 ರೂ. ಆಸುಪಾಸಿನಲ್ಲಿರುತ್ತದೆ. ಈಗ ಭತ್ತದ ಬೆಲೆ ಕ್ವಿಂಟಾಲ್ಗೆ 1200 ರೂ. ಇದೆ. ನದಿ ತೀರದ ಜಮೀನಿನಲ್ಲಿ ಮುಂಚಿತವಾಗಿ ಕೃಷಿ ಚಟುವಟಿಕೆಗಳು ಶುರುವಾಗುವ ಕಾರಣ ಭತ್ತದ ಕಟಾವು ಆರಂಭವಾಗಿದೆ. ಬೆಲೆ ಇಲ್ಲದ್ದರಿಂದ ರೈತರು ಮಾರುಕಟ್ಟೆಗೆ ಬರುವುದಿಲ್ಲ ಎಂಬ ಭೀತಿ ಅಕ್ಕಿಗಿರಣಿಯವರನ್ನು ಕಾಡುತ್ತಿದೆ.
ಹೊಸ ಅಕ್ಕಿ ದರ ಕ್ವಿಂಟಲ್ಗೆ 3300 ರೂ.ಯಿಂದ 2600 ರೂ.ಗೆ ಕುಸಿತವಾಗಿದೆ. ಅಕ್ಕಿಯ ಉಪ ಉತ್ಪನ್ನಗಳಾದ ನುಚ್ಚು, ತೌಡುಗಳ ಬೆಲೆಯೂ ಕುಸಿದಿದೆ. ಹೀಗಾಗಿ ರೈತರಿಗಿಂತ ಮೊದಲು ಅಕ್ಕಿ ಗಿರಣಿಯವರೇ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸುತ್ತಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಖರೀದಿ ಕೇಂದ್ರಗಳ ಆರಂಭ ನೆಪ ಮಾತ್ರಕ್ಕೆ ಎನ್ನುವಂತಾಗಿತ್ತು. ಸೋನಾ ಮಸೂರಿ ದರ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚಿರುವುದೇ ಇದಕ್ಕೆ ಕಾರಣ. ಬ್ಯಾಂಕ್ ಗ್ಯಾರಂಟಿ ಹಾಗೂ ದಾಸ್ತಾನು ಸಂಗ್ರಹಕ್ಕೆ ಸ್ಥಳ ನೀಡದಿರುವುದು ಸೇರಿ ಸರ್ಕಾರದ ಇತರ ನಿಯಮಗಳ ಬಗ್ಗೆ ಅಕ್ಕಿ ಗಿರಣಿಯವರ ತಕರಾರು ಕೂಡ ಇರುತ್ತಿತ್ತು. ಮುಂಗಾರು ಹಂಗಾಮಿಗೆ ಮಾತ್ರ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ. ಕಳೆದ ಬೇಸಿಗೆ ಬೆಳೆಗೂ ಖರೀದಿ ಕೇಂದ್ರದ ಸೌಲಭ್ಯ ಕಲ್ಪಿಸಲಾಗಿತ್ತು. ಕರೊನಾದಿಂದಾಗಿ ಭತ್ತದ ಬೆಲೆ 1600 ರೂ.ಗೆ ಕುಸಿದಿತ್ತು. ಬೆಂಬಲ ಬೆಲೆಯಡಿ 1815 ರೂ. ನಿಗದಿಯಾಗಿದ್ದರಿಂದ ರೈತರು ಖರೀದಿ ಕೇಂದ್ರಗಳತ್ತ ಧಾವಿಸಿದ್ದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ 11 ಸಾವಿರ ಕ್ವಿಂಟಾಲ್ ಭತ್ತ ಖರೀದಿಯಾಗಿತ್ತು. ಪ್ರಸಕ್ತ ಮುಂಗಾರಿಗೆ ಸಾಮಾನ್ಯ ಭತ್ತಕ್ಕೆ 1868 ಹಾಗೂ ಎ ಗ್ರೇಡ್ ಭತ್ತಕ್ಕೆ 1888 ರೂ. ನಿಗದಿಪಡಿಸಲಾಗಿದೆ.
ದೇಶದ ಯಾವುದೇ ರಾಜ್ಯದಲ್ಲಿ ಅಕ್ಕಿಗೆ ಬೇಡಿಕೆ ಇಲ್ಲ. ಇದರಿಂದಾಗಿ ಬಾಡಿಗೆ ಆಧಾರಿತ ಅಕ್ಕಿ ಗಿರಣಿಯವರು ತುಂಬಾ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಿದರೆ ರೈತರ ಜತೆಗೆ ಅಕ್ಕಿ ಗಿರಣಿಯವರಿಗೂ ಅನುಕೂಲವಾಗಲಿದೆ.| ಕೆ.ಎಂ.ಹೇಮಯ್ಯ ಸ್ವಾಮಿರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ
ಭತ್ತದ ಬೆಲೆ ಕುಸಿತದಿಂದ ಬೆಂಬಲ ಬೆಲೆ ಖರೀದಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಿದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆಯೂ ಹೆಚ್ಚಳವಾಗಲಿದೆ.
| ಪುರುಷೋತ್ತಮಗೌಡ ದರೂರು ತುಂಗಭದ್ರಾ ರೈತಸಂಘದ ಅಧ್ಯಕ್ಷ