ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಭಾನುವಾರ ಬೆಂಗಳೂರು, ಬೆಂ. ಗ್ರಾಮಾಂತರ, ಹಾಸನ, ಮಂಡ್ಯ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಆ.22ರಿಂದ ಮುಂದಿನ ಮೂರು ದಿನ ಹಾಗೂ ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ ಮತ್ತು ಕೋಲಾರದಲ್ಲಿ ಆ. 24ರಂದು ಭಾರಿ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಚದುರಿದಂತೆ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾತಾವರಣ ಬದಲು: ವಾರದಿಂದ ಮಳೆ ಕುಂಠಿತ ಕಾರಣದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿತ್ತು. ಬೆಂಗಳೂರು,ಮಂಡ್ಯ, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನದಲ್ಲಿ ಆಗಸ್ಟ್ 2ನೇ ವಾರದಲ್ಲಿದ್ದ 22-24 ಡಿಗ್ರಿ ಸೆಲ್ಸಿಯಸ್‌ನಿಂದ 30-32 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ತಿಳಿ ವಾತಾವರಣ ಇರುವುದರಿಂದ ಬೇಸಿಗೆಗಾಲದಂತೆ ಭಾಸವಾಗುತ್ತಿತ್ತು. ಪ್ರಸ್ತುತ ತಿಂಗಳು ಮೊದಲ ವಾರದಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗಿತ್ತು. ನಂತರ ಕುಂಠಿತವಾಗಿತ್ತು. ಇದೀಗ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾದ ಹಿನ್ನೆಲೆಯಲ್ಲಿ ಮಳೆಯಾಗುತ್ತಿದೆ.
ಹವಾಮಾನ ವೈಪರೀತ್ಯ ವಿಜ್ಞಾನಿ ಎಂ.ಬಿ.ರಾಜೇಗೌಡ ಮಾತನಾಡಿ, ಸದ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮುಂದಿನ 2-3 ದಿನಗಳಲ್ಲಿ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಆದರೆ, ಚಂಡಮಾರುತ ಉಂಟಾಗಲಿದೆಯೇ ಅಥವಾ ಇಲ್ಲವೋ ಎಂಬ ಕುರಿತು ಒಂದೆರಡು ದಿನಗಳಲ್ಲಿ ನಿಖರ ಮಾಹಿತಿ ಸಿಗಲಿದೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ. ಇದರ ಪ್ರಭಾವದಿಂದ ರಾಜ್ಯಕ್ಕೂ ಮಳೆಯಾಗಲಿದೆ ಎಂದರು.
ಕೋವಿಡ್ ಟೈಮ್ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ