

ಚೆನ್ನೈ: ಹೊಸ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಈಗ ಎಲ್ಲೆಡೆ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಟೀಮ್ ಇಂಡಿಯಾದ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ! ಇಂಗ್ಲೆಂಡ್ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ನಡೆದ ಟೀಮ್ ಇಂಡಿಯಾದ ಸಭೆಯಲ್ಲಿ ರೈತರ ಪ್ರತಿಭಟನೆಯ ಕುರಿತು ಆಟಗಾರರ ನಡುವೆ ಸಣ್ಣ ಚರ್ಚೆ ನಡೆದಿದೆ. ಈ ವೇಳೆ ಎಲ್ಲ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂದು ನಾಯಕ ವಿರಾಟ್ ಕೊಹ್ಲಿ ಗುರುವಾರ ತಿಳಿಸಿದರು.
‘ತಂಡದ ಸಭೆಯ ವೇಳೆ ನಾವು ದೇಶದ ವಿವಿಧ ವಿಚಾರಗಳ ಕುರಿತು ಕೂಡ ಚರ್ಚೆ ನಡೆಸುತ್ತೇವೆ. ಆ ವೇಳೆ ರೈತರ ಪ್ರತಿಭಟನೆಯ ಬಗ್ಗೆಯೂ ಚರ್ಚೆ ನಡೆದಿದೆ. ಅದು ಸಭೆಯ ಸಣ್ಣ ಭಾಗವಷ್ಟೇ ಆಗಿರುತ್ತದೆ. ಉಳಿದಂತೆ ಎಂದಿನಂತೆ ತಂಡದ ಕಾರ್ಯತಂತ್ರಗಳು ಮತ್ತು ತಂಡ ಸಂಯೋಜನೆಯ ಬಗ್ಗೆ ಚರ್ಚಿಸಿದೆವು’ ಎಂದು ವಿರಾಟ್ ಕೊಹ್ಲಿ, ನವದೆಹಲಿಯಲ್ಲಿ ಕಳೆದ 2 ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ದೇಶದ ಆಂತರಿಕ ವಿಷಯದ ಬಗ್ಗೆ ವಿದೇಶಿ ಸೆಲೆಬ್ರಿಟಿಗಳ ಹಸ್ತಕ್ಷೇಪದ ಬಗ್ಗೆ ಈಗಾಗಲೆ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಪಾಲ್ ತಾರೆ ರಿಹಾನ್ನಾ ಮತ್ತಿತರ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿರುವುದಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಕ್ಷೇಪ ವ್ಯಕ್ತಪಡಿಸಿ, ದೇಶದ ಸಾರ್ವಭೌಮತೆಗೆ ಯಾರೂ ಧಕ್ಕೆ ತರಬಾರದು ಎಂದು ಆಗ್ರಹಿಸಿದ್ದಕ್ಕೆ ಕೊಹ್ಲಿ ಕೂಡ ಧ್ವನಿಗೂಡಿಸಿದ್ದರು.