ಭಾರತ ವಿರುದ್ಧದ ಯಾವುದೇ ಮುಖಾಮುಖಿಯಲ್ಲಿ Pakistan ಸೋಲು ನಿಶ್ಚಿತ ಎಂದ ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ

John Kiriakou
Published on

Delhi: 2002 ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿಯ ಬಳಿಕ ಉಂಟಾದ ಉದ್ವಿಗ್ನ ಮಿಲಿಟರಿ ಬಿಕ್ಕಟ್ಟಿನಿಂದಾಗಿ, ಭಾರತ ಮತ್ತು ಪಾಕಿಸ್ತಾನ (Pakistan) ಯುದ್ಧದ ಅಂಚಿನಲ್ಲಿವೆ ಎಂದು ನಂಬಲಾಗಿತ್ತು ಎಂದು ಮಾಜಿ ಸಿಐಎ (Central Intelligence Agency) ಅಧಿಕಾರಿ ಜಾನ್ ಕಿರಿಯಾಕೌ ಬಹಿರಂಗಪಡಿಸಿದ್ದಾರೆ.

9/11 ರ ನಂತರ ಪಾಕಿಸ್ತಾನದಲ್ಲಿ ಸಿಐಎಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದ ಕಿರಿಯಾಕೌ, ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದರು.

ಆ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿರುವ ಲಕ್ಷಣಗಳಿದ್ದವು, ವಿದೇಶಾಂಗ ಉಪ ಕಾರ್ಯದರ್ಶಿ ಉಭಯ ದೇಶಗಳ ನಡುವೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದರು. ಈ ಸಮಯದಲ್ಲಿ ಅಮೆರಿಕಾ ಗಮನವನ್ನು ಅಲ್-ಖೈದಾ ಮತ್ತು ಅಫ್ಘಾನಿಸ್ತಾನವು ಆಕ್ರಮಿಸಿಕೊಂಡಿತ್ತು ಮತ್ತು ಭಾರತದ ಬಗ್ಗೆ ನಮಗೆ ಎಂದಿಗೂ ಎರಡನೇ ಆಲೋಚನೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನದಿಂದ ಭಾರತದಲ್ಲಿ ಭಯೋತ್ಪಾದನೆ.. ಜಾನ್ ಕಿರಿಯಾಕೌ

2008 ರ ಮುಂಬೈ ದಾಳಿ ಸೇರಿದಂತೆ ನಂತರದ ದಿನಗಳ ಬಗ್ಗೆ ಮಾತನಾಡಿದ ಕಿರಿಯಾಕೌ, ಪಾಕಿಸ್ತಾನ ಬೆಂಬಲಿತ ಕಾಶ್ಮೀರಿ ಭಯೋತ್ಪಾದಕ ಗುಂಪುಗಳು ಈ ರೀತಿಯ ಘಟನೆಗೆ ನೇರ ಕಾರಣವಾಗಿವೆ, ಪಾಕ್​​ ದ್ವಂದ್ವತೆ ಮತ್ತು ಜಾಗತಿಕ ನಿಷ್ಕ್ರಿಯತೆಯೇ ದೊಡ್ಡ ಸಮಸ್ಯೆಯಾಗಿದ್ದು, ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಯನ್ನು ನಡೆಸುತ್ತಿದ್ದರು, ಅದರ ಕುರಿತಾಗಿ ಯಾರೂ ಗಮನಹರಿಸಲಿಲ್ಲ ಎಂದರು. ಸಂಸತ್ತು ಮತ್ತು ಮುಂಬೈ ದಾಳಿಯ ನಂತರ ಭಾರತ ಸಂಯಮವನ್ನು ತೋರಿಸಿತು, ಆದರೆ ಅದರ ಕಾರ್ಯತಂತ್ರದ ತಾಳ್ಮೆಯನ್ನು ಅನೇಕರು ದೌರ್ಬಲ್ಯವೆಂದು ತಪ್ಪಾಗಿ ಭಾವಿಸಿದರು. ಭಾರತದೊಂದಿಗಿನ ಯಾವುದೇ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನ ಸೋಲುತ್ತದೆ ಎಂದ ಕಿರಿಯಾಕೌ, ಪಾಕ್​ ತನ್ನ ಮುಖಾಮುಖಿ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸಿದರು.

2016 ರಲ್ಲಿ ಸರ್ಜಿಕಲ್ ಸ್ಟ್ರೈಕ್‌ಗಳಿಂದ ಹಿಡಿದು, 2019 ರಲ್ಲಿ ಬಾಲಕೋಟ್ ವೈಮಾನಿಕ ದಾಳಿಯವರೆಗೆ ಮತ್ತು ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ ಕಾರ್ಯಚರಣೆಯವರೆಗೆ ಭಯೋತ್ಪಾದನೆಗೆ ಭಾರತ ನೀಡಿದ ಪ್ರತಿಕ್ರಿಯೆಗಳನ್ನು ಅವರು ಇದೇ ವೇಳೆ ಉಲ್ಲೇಖಿಸಿದರು. ಪರಮಾಣು ಬೆದರಿಕೆ ಅಥವಾ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಭಾರತ ಮತ್ತೆ ಮತ್ತೆ ರುಜುವಾತು ಮಾಡಿದೆ ಎಂದು ಕಿರಿಯಾಕೌ ಹೇಳಿದರು.

ಜಾನ್ ಕಿರಿಯಾಕೌ ಯಾರು?

ಜಾನ್ ಕಿರಿಯಾಕೌ 15 ವರ್ಷಗಳ ಕಾಲ CIA(Central Intelligence Agency) ಕಾರ್ಯನಿರ್ವಹಿಸಿದ್ದು, ಮೊದಲು ವಿಶ್ಲೇಷಕರಾಗಿ ಮತ್ತು ನಂತರ 9/11 ರ ನಂತರ ಪಾಕಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಪೇಶಾವರ್, ಕರಾಚಿ, ಲಾಹೋರ್, ಫೈಸಲಾಬಾದ್ ಮತ್ತು ಕ್ವೆಟ್ಟಾದಲ್ಲಿ ಅಲ್-ಖೈದಾ ಸದಸ್ಯರನ್ನು ಪತ್ತೆಹಚ್ಚಿದರು, ನಂತರ CIA ಯ ಕಾರ್ಯಾಚರಣೆಗಳ ಉಪ ನಿರ್ದೇಶಕರಿಗೆ ಕಾರ್ಯನಿರ್ವಾಹಕ ಸಹಾಯಕರಾದರು. 2007 ರಲ್ಲಿ, ಅವರು ರಾಷ್ಟ್ರೀಯ ದೂರದರ್ಶನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net