

ಇಂದೋರ್: ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸ್ಥಾನ ಖಾತ್ರಿ ಪಡಿಸಿಕೊಂಡ ಮೊದಲೆರಡು ತಂಡಗಳಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಶನಿವಾರ ಪರಸ್ಪರ ಎದುರಾಗಲಿವೆ. ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಉಭಯ ತಂಡಗಳು ಸೆಣಸಲಿದ್ದು, ಗೆದ್ದ ತಂಡ 4ನೇ ಸ್ಥಾನಿ ಆತಿಥೇಯ ಭಾರತ ತಂಡಕ್ಕೆ ಸೆಮೀಸ್‌ನಲ್ಲಿ ಸವಾಲೊಡ್ಡಲಿದೆ.
ನಾಕೌಟ್ ಹಂತಕ್ಕೆ ಮುನ್ನ ಎರಡೂ ತಂಡಗಳಿಗೆ ಇದು ಅಭ್ಯಾಸ ಪಂದ್ಯ ಎನಿಸಿದೆ. ಆರಂಭಿಕ ಪಂದ್ಯದಲ್ಲಿ 10 ವಿಕೆಟ್‌ಗಳ ಸೋಲಿನ ಬಳಿಕ ಸತತ ಐದು ಗೆಲುವಿನೊಂದಿಗೆ ಪುಟಿದೆದ್ದಿರುವ ದಕ್ಷಿಣ ಆಫ್ರಿಕಾ, ಆಡಿರುವ 6 ಪಂದ್ಯಗಳಲ್ಲಿ 10 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಅಜೇಯವಾಗಿರುವ ಆಸ್ಟ್ರೇಲಿಯಾ 6ರಲ್ಲಿ 5 ಗೆಲುವು, 1 ಮಳೆಯಿಂದ ರದ್ದು ಸೇರಿ 11 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಹೊಂದಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಗೆಲುವು ಒಲಿಸಿಕೊಳ್ಳುವ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಲಿದ್ದು, ಮಳೆಯಿಂದ ರದ್ದಾದರೆ ಆಸೀಸ್ ಸ್ಥಾನ ಅಬಾಧಿತವಾಗಿರಲಿದೆ.
ಆಫ್ರಿಕಾ ತಂಡ ಸೋತು, ಇಂಗ್ಲೆಂಡ್ ತನ್ನ ಕೊನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಗೆದ್ದರೆ ಎರಡನೇ ಸ್ಥಾನಕ್ಕೇರಲಿದೆ. ಆದರೆ ಅಂಕಪಟ್ಟಿಯ 1-4 ಹಾಗೂ 2-3 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ. ಭಾರತ ತಂಡ 6 ಅಂಕದೊಂದಿಗೆ 4ನೇ ಸ್ಥಾನ ಖಾತ್ರಿಪಡಿಸಿಕೊಂಡಿದ್ದು, ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೆದ್ದರೂ ಅದೇ ಸ್ಥಾನ ಕಾಯ್ದುಕೊಳ್ಳಲಿದೆ. ದಕ್ಷಿಣ ಆಫ್ರಿಕಾ ಎದುರಿನ 18 ಪಂದ್ಯಗಳ ಪೈಕಿ 16ರಲ್ಲಿ ಆಸ್ಟ್ರೇಲಿಯಾ ಗೆಲುವಿನ ಮೇಲುಗೈ ಹೊಂದಿದ್ದು, ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲೂ ಅಜೇಯವಾಗಿ ಉಳಿದಿದೆ .
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
ಲಂಕಾ-ಪಾಕ್ ಪಂದ್ಯ ರದ್ದು
ಕೊಲಂಬೊ: ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಕ್ರವಾರ ನಿಗದಿಯಾಗಿದ್ದ ಜಂಟಿ ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಭಾರಿ ಮಳೆಯಿಂದಾಗಿ ರದ್ದುಗೊಂಡಿತು. ಇದರೊಂದಿಗೆ ಉಭಯ ತಂಡಗಳು ಐಸಿಸಿ ಟೂರ್ನಿಯಲ್ಲಿ ಅಭಿಯಾನ ಮುಗಿಸಿದ್ದು, ತಮ್ಮ 7ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ತಲಾ 1 ಅಂಕ ಪಡೆದವು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಾಕ್ 4.2 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 18 ರನ್‌ಗಳಿಸಿದಾಗ ಮಳೆ ಅಡ್ಡಿಪಡಿಸಿತು. ಶ್ರೀಲಂಕಾ ತಂಡ ಏಳು ಪಂದ್ಯಗಳಲ್ಲಿ 1 ಜಯ, 3 ಸೋಲು, 3 ರದ್ದು ಸೇರಿ 5 ಅಂಕ ಪಡೆದರೆ, ಪಾಕ್ 4 ಸೋಲು, 3ರದ್ದು ಸೇರಿ 3 ಅಂಕದೊಂದಿಗೆ 7ನೇ ಸ್ಥಾನ ಪಡೆಯಿತು.