

Bengal Files: 2022ರಲ್ಲಿ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಕಾಶ್ಮೀರಿ ಪಂಡಿತರ ವಲಸೆ ಹಿಂದಿದ್ದ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಇದೀಗ ಮತ್ತೊಂದು ‘ಫೈಲ್ಸ್’ನೊಂದಿಗೆ ಸಿನಿಪ್ರೇಕ್ಷಕರ ಎದುರು ಹಾಜರಾಗಲು ಸಜ್ಜಾಗಿದ್ದಾರೆ. ಸರಣಿ ಫೈಲ್ಸ್ಗಳ ಲೋಕಕ್ಕೆ ನುಸುಳಿರುವ ನಿರ್ದೇಶಕರು, ಈಗ ‘ದಿ ಬೆಂಗಾಲ್ ಫೈಲ್ಸ್’ ಮೂಲಕ ಸಿನಿಪ್ರಿಯರಿಗೆ ಮತ್ತೊಂದು ರಣರೋಚಕ ಸಂಗತಿಯನ್ನು ಹೇಳಲು ಹೊರಟ್ಟಿದ್ದಾರೆ. ಇದೇ ಸೆ.05ರಂದು ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ರಿಲೀಸ್ಗೂ ಮುನ್ನವೇ ಚಿತ್ರ ಭಾರೀ ವಿವಾದ ಹಾಗೂ ಕುತೂಹಲವನ್ನು ಕೆರಳಿಸಿದೆ.
ಈ ಹಿಂದೆ ಚಿತ್ರಕ್ಕೆ ‘ದಿ ಡೆಲ್ಲಿ ಫೈಲ್ಸ್’ ಎಂಬ ಶೀರ್ಷಿಕೆಯಿಟ್ಟಿದ್ದ ವಿವೇಕ್ ಅಗ್ನಿಹೋತ್ರಿ, ನಂತರದಲ್ಲಿ ಅದನ್ನು ‘ದಿ ಬೆಂಗಾಲ್ ಫೈಲ್ಸ್’ ಎಂದು ಮರುನಾಮಕರಣ ಮಾಡಿದರು. ಈ ಚಿತ್ರದಲ್ಲಿ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ ಹಾಗೂ ನಿರ್ಮಾಪಕಿಯೂ ಆದ ಪಲ್ಲವಿ ಜೋಶಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಸೆ.05ರಂದು ಜಾಗತಿಕವಾಗಿ ತೆರೆಕಾಣಲು ಸಜ್ಜಾಗಿರುವ ಈ ಚಿತ್ರವು ಸದ್ಯ ವ್ಯಾಪಕ ಟೀಕೆ, ವಿವಾದಗಳಿಗೆ ಗುರಿಯಾಗಿದೆ.
1946ರ ಕಲ್ಕತ್ತಾ ಗಲಭೆಯಲ್ಲಿ ಸಂಭವಿಸಿದ ಕೊಲೆಗಳು ಮತ್ತು ನೋಖಾಲಿ ಗಲಭೆಗಳ ಸುತ್ತ ಸುತ್ತುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಸದ್ಯ ಇದೇ ವಿವಾದಕ್ಕೆ ಬಹುಮುಖ್ಯ ಕಾರಣವಾಗಿದೆ. ಟ್ರೇಲರ್ ಬಿಡುಗಡೆಗೆ ತಡೆಯೊಡ್ಡಿದ್ದ ಹಲವರು, ಇದನ್ನು ಮತ್ತು ಸಿನಿಮಾವನ್ನು ತೆರೆಗೆ ತರಬಾರದು ಎಂದು ಪ್ರತಿಭಟಿಸಿದ್ದರು. ಬೆಂಗಾಲ್ ಫೈಲ್ಸ್ ರಿಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೋಲ್ಕತ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಚಿತ್ರದಲ್ಲಿ ಮೂಡಿಬರುವ ಒಂದು ಪಾತ್ರವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ವಿವೇಕ್ ವಿರುದ್ಧ ದೂರು ಕೂಡ ದಾಖಲಾಯಿತು. ಇನ್ನು ತಮ್ಮ ವಿರುದ್ಧ ಆಡಳಿತರೂಢ ಪಕ್ಷದವರಿಂದ ಹಲವು ಎಫ್ಐಆರ್ ದಾಖಲಾಗಿವೆ ಎಂದು ಸ್ವತಃ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ, ಚಿತ್ರದ ಬಿಡುಗಡೆಗೆ ಅಡ್ಡಿಪಡಿಸುವುದು.
ಇನ್ನು ಇತ್ತೀಚೆಗಷ್ಟೇ ತಮ್ಮ ಚಿತ್ರದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಪಲ್ಲವಿ ಜೋಶಿ, "ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ನೇರ ಸಂವಾದಕ್ಕೆ ನಾವು ಮುಕ್ತವಾಗಿದ್ದೇವೆ. ನನ್ನ ಪ್ರಕಾರ, ಅವರಿಗೆ ವಿಭಿನ್ನ ರಾಜಕೀಯ ಸಿದ್ಧಾಂತ ಮತ್ತು ಎಲ್ಲವೂ ಇದೆ. ಆದರೆ, ಅವರೂ ಕೂಡ ಒಬ್ಬ ಭಾರತೀಯರು. ಓರ್ವ ಭಾರತೀಯ ಮಹಿಳೆ. ಅವರ ಪೂರ್ವಜರು ನಾವು ಚಿತ್ರದಲ್ಲಿ ತೋರಿಸುತ್ತಿರುವ ವಿಷಯವನ್ನು ಅನುಭವಿಸಿದ್ದಾರೆ ಎಂಬುದು ನನಗೆ ಖಾತ್ರಿಯಿದೆ" ಎಂದಿದ್ದಾರೆ.
"ನಾವು ಸಿನಿಮಾದಲ್ಲಿ ತೋರಿಸಿರುವ ವಿಷಯಗಳು ಅವರ ಹೃದಯಕ್ಕೆ ಬಹಳ ಹತ್ತಿರವಾಗಿವೆ ಎಂಬುದು ನನ್ನ ಅನಿಸಿಕೆ. ಹೀಗಾಗಿ, ಅವರು ನಮಗೆ ಪ್ರೇಕ್ಷಕರನ್ನು ನೀಡಿದರೆ, ನಾವು ಅವರಿಗೆ ನಮ್ಮ ಚಿತ್ರವನ್ನು ತೋರಿಸಲು ಸಿದ್ಧ. ಈ ಚಿತ್ರವನ್ನು ನೋಡಿದ ಬಳಿಕ ಅವರೇ ನಿರ್ಧರಿಸಲಿ. ಆದರೆ, ಟ್ರೇಲರ್ ಆಧಾರದ ಮೇಲೆ ಅಥವಾ ಹಿಂದಿನ ಯಾವುದಾದರೂ ಸಿನಿಮಾದಲ್ಲಿ ತೊಂದರೆಯಿದ್ದರೆ, ಅದರಿಂದ ಒಂದು ಚಿತ್ರವನ್ನು ಬ್ಯಾನ್ ಮಾಡಲು ಆಗಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಜೋಶಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಗೋವಿಂದ್ ನಾಮದೇವ್, ಮೋಹನ್ ಕಪೂರ್, ಪಲೋಮಿ ಘೋಷ್, ದಿವ್ಯಾ ಪಾಲತ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಾಲ್ ಫೈಲ್ಸ್ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಪಲ್ಲವಿ ಜೋಶಿ ನಿರ್ಮಿಸಿದ್ದಾರೆ,(ಏಜೆನ್ಸೀಸ್).