

ಕೋಲ್ಕತ/ನವದೆಹಲಿ: ನವರಾತ್ರಿಯ ಮೊದಲ ದಿನದಿಂದಾಗಿ ಅಹಮದಾಬಾದ್ನಲ್ಲಿ ಅಕ್ಟೋಬರ್ 15ರಂದು ನಿಗದಿಯಾಗಿದ್ದ ಪಂದ್ಯ ಒಂದು ದಿನ ಮುಂಚಿತವಾಗಿ ನಡೆಯುವುದು ಈಗಾಗಲೆ ಬಹುತೇಕ ಖಚಿತಗೊಂಡಿದೆ. ಇದರ ನಡುವೆ ಈಗ ಪಾಕಿಸ್ತಾನ ತಂಡದ ಮತ್ತೊಂದು ಪಂದ್ಯದ ದಿನಾಂಕವನ್ನೂ ಬದಲಾಯಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮತ್ತು ಐಸಿಸಿಗೆ ಎದುರಾಗಿದೆ. ವಿಶ್ವಕಪ್ನಲ್ಲಿ ಪಾಕಿಸ್ತಾನ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ನಡುವಿನ ಪಂದ್ಯ ನವೆಂಬರ್ 12ಕ್ಕೆ ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಅದೇ ದಿನ ಕೋಲ್ಕತದಲ್ಲಿ ಕಾಳಿ ಪೂಜೆ ನಡೆಯಲಿದ್ದು, ಪಂದ್ಯಕ್ಕೆ ಭದ್ರತಾ ಕಳವಳ ಎದುರಾಗಿರುವ ಬಗ್ಗೆ ಆತಿಥೇಯ ಬಂಗಾಳ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.
ಒಂದು ವೇಳೆ ಈ ಪಂದ್ಯದ ದಿನಾಂಕ ಬದಲಾವಣೆ ಮಾಡಿದರೆ, ವಿಶ್ವಕಪ್ನಲ್ಲಿ ಪಾಕಿಸ್ತಾನದ 3ನೇ ಪಂದ್ಯದ ದಿನಾಂಕ ಬದಲಾವಣೆ ಕಂಡಂತಾಗುತ್ತದೆ. ಈಗಾಗಲೆ ಭಾರತ-ಪಾಕ್ ಪಂದ್ಯದ ದಿನಾಂಕ ಬದಲಾವಣೆಯಿಂದ ಪಾಕ್ ತಂಡ ಶ್ರೀಲಂಕಾ ವಿರುದ್ಧ ಅಕ್ಟೋಬರ್ 12ರಂದು ಹೈದರಾಬಾದ್ನಲ್ಲಿ ನಿಗದಿಯಾಗಿರುವ ಪಂದ್ಯವನ್ನು ಅಕ್ಟೋಬರ್ 10ರಂದೇ ಆಡುವ ನಿರೀಕ್ಷೆ ಇದೆ.
ಕಾಳಿ ಪೂಜೆ ಪಶ್ಚಿಮ ಬಂಗಾಳದ 2ನೇ ಅತಿದೊಡ್ಡ ಹಬ್ಬವಾಗಿದೆ. ಆ ದಿನ ಕೋಲ್ಕತದಲ್ಲಿ ಸಾವಿರಾರು ಸ್ಥಳಿಯ ಸಂಘಟನೆಗಳು ಪೆಂಡಾಲ್ಗಳನ್ನು ಹಾಕಿ ಕಾಳಿದೇವಿಯ ಪೂಜೆ ಮಾಡುತ್ತವೆ ಮತ್ತು ಇವುಗಳಿಗೆ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗುತ್ತದೆ. ಹೀಗಾಗಿ ಅದೇ ದಿನ ಪಂದ್ಯದ ಭದ್ರತೆಗೂ ಸಿಬ್ಬಂದಿಯನ್ನು ಒದಗಿಸುವುದು ಕಷ್ಟವಾಗಲಿದೆ ಎಂದು ಕೋಲ್ಕತ ಪೊಲೀಸರು ತಿಳಿಸಿದ್ದಾರೆ.