

ಲಾಹೋರ್: ನಾಯಕ ಬಾಬರ್ ಅಜಮ್, ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ ಮತ್ತು ವೇಗಿ ಶಹೀನ್ ಅಫ್ರಿದಿ ಸಹಿತ ಪಾಕಿಸ್ತಾನದ ಅಗ್ರ ಕ್ರಿಕೆಟಿಗರ 4 ಪಟ್ಟು ಏರಿಕೆ ಕಾಣಲಿದೆ. ಪಾಕ್ ಕ್ರಿಕೆಟಿಗರು ವಿದೇಶಿ ಟಿ20 ಲೀಗ್ಗಳಿಗೆ ಹೋಗುವುದನ್ನು ತಡೆಯಲು ಪಿಸಿಬಿ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಒಪ್ಪಂದದ ಅನ್ವಯ ವಾರ್ಷಿಕ ವೇತನಕ್ಕೆ ಬದಲಾಗಿ ಮಾಸಿಕ ವೇತನ ನೀಡಲಿದೆ ಎನ್ನಲಾಗಿದೆ.
ಹೊಸ ವೇತನದ ಅನ್ವಯ, ಎ ಶ್ರೇಣಿ ಆಟಗಾರರು ಮಾಸಿಕ 13.22 ಲಕ್ಷ ರೂ. (45 ಲಕ್ಷ ಪಾಕ್ ರೂ.) ಪಡೆಯಲಿದ್ದಾರೆ. ಬಿ ಶ್ರೇಣಿ ಆಟಗಾರರು ಮಾಸಿಕ 8.81 ಲಕ್ಷ ರೂ. ಪಡೆಯಲಿದ್ದಾರೆ ಎನ್ನಲಾಗಿದೆ. ಆದರೂ ಭಾರತದ ಕ್ರಿಕೆಟಿಗರಿಗೆ ಬಿಸಿಸಿಐ ನೀಡುವ ವೇತನಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆಯಾಗಿದೆ. ಭಾರತದಲ್ಲಿ ಎ ಪ್ಲಸ್ ಶ್ರೇಣಿ ಗುತ್ತಿಗೆಯ ಆಟಗಾರರು ಮಾಸಿಕ 58 ಲಕ್ಷದಂತೆ ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತ ಪರಿಣಾಮ?
ಪಾಕಿಸ್ತಾನ ಕ್ರಿಕೆಟಿಗರ ವೇತನವನ್ನು ಇಷ್ಟು ಪ್ರಮಾಣದಲ್ಲಿ ಏರಿಸುತ್ತಿರುವುದು ಕಳೆದೊಂದು ವರ್ಷದಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಂಡಿರುವುದರ ಪರಿಣಾಮ ಎಂದೂ ಹೇಳಲಾಗುತ್ತಿದೆ. ಡಾಲರ್ ಲೆಕ್ಕಾಚಾರದ ಪ್ರಕಾರ ನೋಡಿದರೆ ಕ್ರಿಕೆಟಿಗರ ವೇತನವನ್ನು 4 ಪಟ್ಟು ಅಲ್ಲ 2 ಪಟ್ಟು ಮಾತ್ರ ಏರಿಸಲಾಗಿದೆ. ಪಾಕಿಸ್ತಾನದ ರೂಪಾಯಿ ಇತ್ತೀಚೆಗೆ ಸಾರ್ವಕಾಲಿಕ ಕುಸಿತ ಕಂಡಿದ್ದು, ಒಂದು ಅಮೆರಿಕನ್ ಡಾಲರ್ ಈಗ 239.37 ಪಾಕಿಸ್ತಾನ ರೂಪಾಯಿಗೆ ಸಮನಾಗಿದೆ. ಅಲ್ಲದೆ ಪಾಕಿಸ್ತಾನದ ಒಂದು ರೂಪಾಯಿ ಭಾರತದ 29 ಪೈಸೆಗೆ ಸಮನಾಗಿದೆ.