ಲೈಂಗಿಕ ಕಿರುಕುಳ ಆರೋಪಿ ಬ್ರಿಜ್​ಭೂಷಣ್​ ಬಣದ ಎದುರು ಚುನಾವಣಾ ಅಖಾಡಕ್ಕಿಳಿದ ಮಾಜಿ ಮಹಿಳಾ ಕುಸ್ತಿಪಟು!

wre web
Published on

ನವದೆಹಲಿ: ದೆಹಲಿ ಕಾಮನ್ವೆಲ್ತ್​ ಗೇಮ್ಸ್​ ಸ್ವರ್ಣ ಪದಕ ವಿಜೇತೆ ಮಾಜಿ ಕುಸ್ತಿಪಟು ಅನಿತಾ ಶೆರಾನ್​ ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ​) ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದಾರೆ. ನಿರ್ಗಮನ ಅಧ್ಯಕ್ಷ ಬ್ರಿಜ್​ಭೂಷಣ್​ ಶರಣ್​ ಸಿಂಗ್​ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷಿ ಹೇಳಿದ್ದ ಅನಿತಾ ಈಗ ಅವರ ವಿರುದ್ಧ ನೇರವಾಗಿ ತೊಡೆ ತಟ್ಟಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಅಧ್ಯಕ್ಷ ಹುದ್ದೆಯ ರೇಸ್​ನಲ್ಲಿರುವ ನಾಲ್ವರು ಅಭ್ಯರ್ಥಿಗಳಲ್ಲಿ ಅನಿತಾ ಏಕೈಕ ಮಹಿಳೆ ಆಗಿದ್ದಾರೆ. ಬ್ರಿಜ್​ ಭೂಷಣ್​ ಬಣದಿಂದ ಜೈ ಪ್ರಕಾಶ್​ (ದೆಹಲಿ), ಸಂಜಯ್​ ಸಿಂಗ್​ (ಉತ್ತರ ಪ್ರದೇಶ) ಅಧ್ಯಕ್ಷ ಹುದ್ದೆಯ ಕಣದಲ್ಲಿದ್ದಾರೆ. ಜಮ್ಮು ಕಾಶ್ಮೀರದ ಹಿರಿಯ ಎಸ್ಪಿ ದುಶ್ಯಂತ್​ ಶರ್ಮ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿರುವ ನಾಲ್ಕನೇ ಅಭ್ಯರ್ಥಿ ಆಗಿದ್ದಾರೆ.

ಚುನಾವಣಾಧಿಕಾರಿ ಆಗಿರುವ ಜಮ್ಮು-ಕಾಶ್ಮೀರದ ಹೈಕೋರ್ಟ್​ ನ್ಯಾಯಮೂರ್ತಿ ಮಹೇಶ್​ ಮಿತ್ತಲ್​ ಕುಮಾರ್​ ಮಂಗಳವಾರ ನಾಮಪತ್ರ ಪರಿಶೀಲನೆಯ ಬಳಿಕ ಡಬ್ಲ್ಯುಎಫ್​ಐನ ಎಲ್ಲ 15 ಹುದ್ದೆಗಳಿಗೆ ರೇಸ್​ನಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಆಗಸ್ಟ್​ 7 ಕೊನೇ ದಿನವಾಗಿದ್ದು, ಅಧ್ಯಕ್ಷ ಹುದ್ದೆಗೆ ರೇಸ್​ನಲ್ಲಿರುವ ಬ್ರಿಜ್​ಭೂಷಣ್​ ಬಣದ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು ಹಿಂದೆ ಸರಿಯುವ ನಿರೀಕ್ಷೆ ಇದೆ. ದೆಹಲಿ ಕುಸ್ತಿ ಸಂಸ್ಥೆ ಅಧ್ಯಕ್ಷ ಜೈ ಪ್ರಕಾಶ್​ ಅಧ್ಯಕ್ಷ ಹುದ್ದೆಯ ಜತೆಗೆ ಉಪಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್​ 12ರಂದು ಚುನಾವಣೆ ನಡೆಯಲಿದೆ.

ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್​ಭೂಷಣ್​ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಅನಿತಾ ಶೆರಾನ್​ ಪ್ರಮುಖ ಸಾಕ್ಷಿ ಆಗಿದ್ದಾರೆ. 38 ವರ್ಷದ ಅನಿತಾ ಹರಿಯಾಣ ಮೂಲದವರಾಗಿದ್ದರೂ, ಡಬ್ಲ್ಯುಎಫ್​ಐ ಚುನಾವಣೆಯಲ್ಲಿ ಒಡಿಶಾ ಪ್ರತಿನಿಧಿಯಾಗಿ ಕಣಕ್ಕಿಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net