

ನವದೆಹಲಿ: ಐಪಿಎಲ್ ಸೀಸನ್ 17ಕ್ಕೆ ದಿನಗಣನೆ ಆರಂಭವಾಗಿದ್ದು, ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಫ್ರಾಂಚೈಸಿಗಳು ಈಗಾಗಲೇ ಭರದ ಸಿದ್ಧತೆ ಆರಂಭಿಸಿವೆ. ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಆರ್ಸಿಬಿ ಕಣಕ್ಕಿಳಿಯುತ್ತಿದ್ದು, ಅಭಿಮಾನಿಗಳ ಆಸೆ ಈಡೇರಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಆರಂಭಿಸಿದೆ.
2023ರ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಆರ್ಸಿಬಿ 6 ಹೊಸ ಆಟಗಾರರನ್ನು ಖರೀದಿಸಿತ್ತು. ಹರಾಜಿಗೂ ಮುನ್ನ 19 ಆಟಗಾರರನ್ನು ಉಳಿಸಿಕೊಂಡಿದ್ದ ಆರ್ಸಿಬಿ ತಂಡವು ಈ ಬಾರಿಯ ಆಕ್ಷನ್ನಲ್ಲಿ ಬೌಲರ್ಗಳ ಖರೀದಿಗೆ ಒತ್ತು ನೀಡಿತ್ತು. ಆದರೆ, ಆರ್ಸಿಬಿ ಬೌಲಿಂಗ್ ಲೈನ್ ಅಪ್ ಕುರಿತು ಅಪಸ್ವರ ತೆಗೆದಿರುವ ತಂಡದ ಮಾಜಿ ಆಟಗಾರನೋರ್ವ ಮೋಯೆ ಮೋಯೆ ಎಂದು ಟೀಕಿಸಿದ್ದಾರೆ.
ಆನ್ಲೈನ್ ಗೇಮ್ ಸ್ಟ್ರೀಮಿಂಗ್ ವೇಳೆ ಆರ್ಸಿಬಿ ಬೌಲಿಂಗ್ ಲೈನ್ಅಪ್ ಕುರಿತು ಚಹಲ್ ಅವರನ್ನು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಚಹಲ್ ಮೋಯೆ ಮೋಯೆ ಎಂದು ಹೇಳುವ ಮೂಲಕ ಮಾಜಿ ತಂಡವನ್ನು ಟ್ರೋಲ್ ಮಾಡಿದ್ದಾರೆ. ಈ ಬಾರಿಯೂ ಆರ್ಸಿಬಿ ಬೌಲಿಂಗ್ ಲೈನ್ಅಪ್ ಅನ್ನು ಮೋಯೆ ಮೋಯೆ ಎಂದು ಹೇಳುವ ಮೂಲಕ ಮಾಜಿ ತಂಡದ ವಿರುದ್ಧದ ಮುನಿಸನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.
ಯಜುವೇಂದ್ರ ಚಹಲ್ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಚಹಲ್ ಹೇಳಿಕೆಗೆ ಮೋಯೆ ಮೋಯೆ ಎಂದು ಕಮೆಂಟ್ ಮಾಡಿದರೆ ಮತ್ತೊಂದಷ್ಟು ಜನ ಈ ರೀತಿಯ ಹೇಳಿಕೆಗಳು ನಿಮಗೆ ಶೋಭೆ ತರುವುದಿಲ್ಲ ಎಂದು ಚಹಲ್ ವಿರುದ್ಧ ಅಸಮಾಧಾನ ಹೊರಾಹಾಕಿದ್ದಾರೆ.