ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಸ್ತೆಗೆ : ಹಳೆಯಂಗಡಿಯಲ್ಲಿ ಪಂಚಾಯಿತಿ ಅಧ್ಯಕ್ಷರಿಂದ ಕಾರ್ಯಾಚರಣೆ ಕ್ರಮದ ಎಚ್ಚರಿಕೆ

Published on

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಾತ್ರಿ ಹೊತ್ತು ಹೆದ್ದಾರಿಯಲ್ಲಿ ಹರಿಯ ಬಿಡುತ್ತಿದ್ದು ಸ್ಥಳೀಯರ ದೂರಿನ ಮೇರೆಗೆ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಮಾರ್ಕೆಟ್ ಹತ್ತಿರದ ಬಹು ಮಹಡಿ ವಸತಿ ಸಂಕೀರ್ಣದ ಕೊಳಚೆ ತ್ಯಾಜ್ಯ ನೀರು ಹೆದ್ದಾರಿ ರಸ್ತೆ ಬದಿಯ ತೋಡಿಗೆ ಬಿಡುತ್ತಿದ್ದು ಪರಿಸರದಲ್ಲಿ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ. ಮಳೆ ಬರುವಾಗ ತ್ಯಾಜ್ಯ ನೀರನ್ನು ಹೆದ್ದಾರಿ ತೋಡಿಗೆ ಬಿಡುವ ಪ್ರಕರಣ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ ಎಂದು ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು.

ಕೆಲ ತಿಂಗಳ ಹಿಂದೆ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ಬಿಡುವ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಂಚಾಯಿತಿ ಕಾರ್ಯಾಚರಣೆ ನಡೆಸಿ ಕೊಳಚೆ ನೀರು ಬಿಡುವ ಪೈಪ್‌ಗೆ ಕ್ಯಾಪ್ ಹಾಕಿ ಮುಚ್ಚಲಾಗಿತ್ತು.

ಬಳಿಕ ಶಾಸಕ ಉಮಾನಾಥ್ ಕೋಟ್ಯಾನ್ ಮಧ್ಯಸ್ಥಿಕೆಯಲ್ಲಿ ಪಂಚಾಯಿತಿ ಅಧ್ಯಕ್ಷರು, ಕಟ್ಟಡ ಮಾಲೀಕರು ಮತ್ತು ನಾಗರಿಕರ ಸಭೆ ನಡೆದು ತ್ಯಾಜ್ಯವನ್ನು ಟ್ಯಾಂಕ್‌ನಲ್ಲಿ ಇರಿಸಿ ಬಳಿಕ ಕಟ್ಟುನಿಟ್ಟಾಗಿ ವಿಲೇವಾರಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಮಳೆಗಾಲ ಬರುತ್ತಿದ್ದಂತೆ ಕಟ್ಟಡದ ಮಾಲೀಕರು ಕಟ್ಟಡದ ತ್ಯಾಜ್ಯ ನೀರನ್ನು ಪುನಃ ಹಿಂದಿನಂತೆ ಹೊರಬಿಡಲು ಆರಂಭಿಸಿದ್ದು ಪರಿಸರ ಮಾಲಿನ್ಯ ಜತೆಗೆ ರೋಗ ಭೀತಿ ಎದುರಾಗಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಟ್ಟಡದ ಮಾಲೀಕರು ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಂಚಾಯಿತಿ ಸದಸ್ಯರಾದ ಚಂದ್ರಿಕಾ, ನಾಗರಾಜ್ ಮತ್ತು ಪಂಚಾಯಿತಿ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net