ಕಳಪೆ ಕಾಮಗಾರಿಗೆ ಹಣ ಅಪವ್ಯಯ! : ಮಣಿಯಂಪಾರೆ- ದೇರಡ್ಕ- ಶಿರಿಯ- ಕುರಡ್ಕ ರಸ್ತೆ ಅಭಿವೃದ್ಧಿ

Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಪುತ್ತಿಗೆ ಮತ್ತು ಎಣ್ಮಕಜೆ ಪಂಚಾಯಿತಿಗಳನ್ನು ಸಂಪರ್ಕಿಸುವ ಮಣಿಯಂಪಾರೆ- ದೇರಡ್ಕ- ಶಿರಿಯ- ಕುರಡ್ಕ ರಸ್ತೆಯ ಅಭಿವೃದ್ಧಿ ಹಳ್ಳ ಹಿಡಿಯುತ್ತಿದ್ದು, ಭಾರಿ ಮೊತ್ತದ ಕಾಮಗಾರಿ ಕಳಪೆಯಾಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ಪೆರ್ಲ- ಪುತ್ತಿಗೆ- ಸೀತಾಂಗೋಳಿ ರಸ್ತೆಯ ಮಣಿಯಂಪಾರೆಯಿಂದ ಶಿರಿಯ ಅಣೆಕಟ್ಟು ಮೂಲಕ ಸೇರಾಜೆ ಹಾದಿಯಾಗಿ ಕುರಡ್ಕ ಸಾಗಿ ಪೂವನಡ್ಕ ಭಾಗ ಹಾಗೂ ಪೆರ್ಲ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಗ್ರಾಮೀಣ ಪ್ರದೇಶದಲ್ಲಿ ಹಾದುಹೋಗುವ ಪ್ರಸಕ್ತ ರಸ್ತೆಯನ್ನು ಕೇಂದ್ರ ಸರ್ಕಾರದ ಮೊತ್ತ ಬಳಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರದ ಗ್ರಾಮೀಣಾಭಿವದ್ಧಿ ಸಚಿವಾಲಯದ ಭಾರತ್ ನಿರ್ಮಾಣ್ ಯೋಜನೆಯನ್ವಯ 8 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಮಣಿಯಂಪಾರೆ ಪ್ರದೇಶ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ, ಅಲ್ಲಿಂದ ಮುಂದೆ ದೇರಡ್ಕ, ಶಿರಿಯ ಪ್ರದೇಶ ಪುತ್ತಿಗೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಮುಂದಕ್ಕೆ ಸೇರಾಜೆ, ಕುರಡ್ಕ ಪ್ರದೇಶ ಮತ್ತೆ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತಿದೆ.

ಕಳಪೆ ಕಾಮಗಾರಿ ಆರೋಪ

ಸೇರಾಜೆಯಿಂದ ಕುರಡ್ಕವರೆಗಿನ ಕಾಮಗಾರಿಯಲ್ಲಿ ವ್ಯಾಪಕ ಲೋಪಗಳು ಕಂಡುಬರುತ್ತಿವೆ. ರಸ್ತೆ ತಿರುವುಗಳನ್ನು ಸರಿಪಡಿಸುವುದಾಗಲಿ, ಕುಸಿತಕ್ಕೀಡಾಗುವ ಭಾಗದಲ್ಲಿ ಸೂಕ್ತ ತಡೆಗೋಡೆ ನಿರ್ಮಾಣವಾಗಲಿ ನಡೆಸಿಲ್ಲ. ವಿಪರ್ಯಾಸವೆಂದರೆ ಈ ಹಿಂದೆ ಅಲ್ಲಲ್ಲಿ ನಡೆಸಿರುವ ಕಾಂಕ್ರೀಟ್ ರಸ್ತೆಗೆ ಸೇರ್ಪಡೆಗೊಳಿಸಿ ಕಾಂಕ್ರೀಟ್ ಮುಂದುವರಿಸಲಾಗುತ್ತಿದೆ. ಈ ಹಿಂದೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಕುಸಿತ ಕಂಡಿದ್ದು, ಇದನ್ನು ಹಾಗೇ ಬಿಟ್ಟು, ಮುಂದಕ್ಕೆ ಕಾಮಗಾರಿ ನಡೆಸಲಾಗುತ್ತಿದೆ!

ಇನ್ನು ರಸ್ತೆ ಅಂಚಿಗೆ ಒಳಚರಂಡಿ ನಿರ್ಮಿಸಲಾಗಿಲ್ಲ. ಕೆಲವೊಂದು ಜಾಗದಲ್ಲಿ ರಸ್ತೆಯಂಚಿಗಿರುವ ಜಾಗದ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಲ್ವರ್ಟ್‌ಗಳನ್ನು ಮಳೆನೀರು ಹರಿದುಹೋಗುವ ಜಾಗ ಬಿಟ್ಟು ಎಲ್ಲೆಲ್ಲೋ ನಿರ್ಮಿಸಲಾಗಿದೆ. ಕೆಲವೆಡೆ ರಸ್ತೆ ಕುಸಿತಕ್ಕೀಡಾಗುವ ಭೀತಿಯಿದ್ದು, ಇಲ್ಲಿ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.

ಚರಂಡಿ ವ್ಯವಸ್ಥೆಯಿಲ್ಲ!

ಸೇರಾಜೆಯಿಂದ ಕುರಡ್ಕ ಭಾಗಕ್ಕೆ ಒಂದು ಕಿ.ಮೀ.ವರೆಗೂ ರಸ್ತೆ ಅಂಚಿಗೆ ಮಳೆನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆಯಿಲ್ಲ. ರಸ್ತೆಯ ಒಂದು ಪಾರ್ಶ್ವ ಇಳಿಜಾರಿನಿಂದ ಕೂಡಿದ್ದರೆ, ಮೇಲ್ಭಾಗ ತೋಟಗಾರಿಕಾ ನಿಗಮದ ಗೇರುತೋಟದ ಜಾಗ ಒಳಗೊಂಡಿದೆ. ಗೇರುತೋಟದಿಂದ ನೀರು ಹರಿದು ರಸ್ತೆಗೇ ಬಂದು ಸೇರುತ್ತಿದೆ. ಈ ನೀರು ರಸ್ತೆಯಲ್ಲೇ ಸಾಗಬೇಕಾದ ದುಸ್ಥಿತಿಯಿದೆ. ಇದರಿಂದ ರಸ್ತೆ ಕಾಮಗಾರಿ ಪೂರ್ಣಗೊಂಡರೂ ಒಂದೆರಡು ಮಳೆಗೆ ಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮಹತ್ವದ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯನ್ವಯ ನಡೆಯುತ್ತಿರುವ ಕಾಮಗಾರಿಯೊಂದು ಇಷ್ಟೊಂದು ಕಳಪೆಯಾಗಿ ಸಾಗುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಂಟು ಕೋಟಿ ರೂ. ಪೋಲು

ಕೇಂದ್ರ ಸರ್ಕಾರದ ವಿಶೇಷ ತಂಡವೊಂದು ರಸ್ತೆ ಕಾಮಗಾರಿಗೂ ಮೊದಲು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಿದ್ದು, ರಸ್ತೆಗೆ ಅಗತ್ಯ ಜಾಗವನ್ನು ಗುರುತು ಮಾಡಿ ಹೋಗಿದ್ದರೂ ಕಾಮಗಾರಿ ನಡೆಯುವಾಗ ಇವೆಲ್ಲವನ್ನೂ ಬಿಟ್ಟು ತಮ್ಮಿಷ್ಟದಂತೆ ರಸ್ತೆ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಎಂಟು ಕೋಟಿ ರೂ. ಮೊತ್ತವನ್ನು ರಸ್ತೆ ಹೆಸರಲ್ಲಿ ಪೋಲು ಮಾಡಲಾಗುತ್ತಿದೆ. ಕಾಮಗಾರಿಗೂ ಮೊದಲು ರಸ್ತೆಗೆ ಅಗತ್ಯ ಜಮೀನು ಕಂಡುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ವ್ಯವಸ್ಥೆಯ ಲೋಪಕ್ಕೆ ಸ್ಪಷ್ಟ ನಿದರ್ಶನವಾಗಿರುವುದಾಗಿ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಪಿಆರ್ ತಯಾರಿಸುವ ಮಧ್ಯೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ದೂರೂ ಕೇಳಿಬರುತ್ತಿದೆ.

ಮಣಿಯಂಪಾರೆ- ದೇರಡ್ಕ- ಶಿರಿಯ- ಕುರಡ್ಕ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಸುವ ನಿಟ್ಟಿನಲ್ಲಿ ಕೇಂದ್ರ ತಂಡವೊಂದು ಸ್ಥಳ ಸಂದರ್ಶನ ನಡೆಸಿ ಸರ್ವೇ ನಡೆಸುವ ಮಧ್ಯೆ ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಕೆಲವೆಡೆ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಲಭ್ಯ ಸ್ಥಳದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಚರಂಡಿ ನಿರ್ಮಿಲು ಸಾಧ್ಯವಾಗಿಲ್ಲ. ರಸ್ತೆ ಕಾಮಗಾರಿ ಯೋಜನೆ ಪ್ರಕಾರ ನಡೆಯುತ್ತಿದೆ. ಮಿತ್ರಾ, ಭಾರತ್ ನಿರ್ಮಾಣ್ ಯೋಜನೆ ಕಾಸರಗೋಡು ಸಹಾಯಕ ಮಹಾ ಅಭಿಯಂತೆ ರಸ್ತೆ ತಿರುವುಗಳಿರುವ ಪ್ರದೇಶದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸದೆ ಯಥಾಪ್ರಕಾರ ಕಾಮಗಾರಿ ನಡೆಸಿರುವುದು. ಹಳೇ ಕಾಂಕ್ರೀಟ್ ರಸ್ತೆಗೆ ಹೊಂದಿಕೊಂಡು ಹೊಸದಾಗಿ ರಸ್ತೆ ಅಭಿವೃದ್ಧಿಪಡಿಸಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net