ನಾರ್ವೆ ಸಂಸತ್ತಿಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ

Published on

ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ನಿಯೋಗವು ನಾರ್ವೆ ಪಾರ್ಲಿಮೆಂಟ್‌ಗೆ ಭೇಟಿ ನೀಡಿತು.

1814 ರಲ್ಲಿ ಸ್ಥಾಪಿತವಾದ ನಾರ್ವೆ ಸಂಸತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸತ್ತುಗಳಲ್ಲಿ ಒಂದು ಹಾಗೂ ಅದೇ ವರ್ಷ ಅಂಗೀಕರಿಸಲಾದ ನಾರ್ವೆಯ ಸಂವಿಧಾನವು ಇಂದಿಗೂ ಶಾಶ್ವತ ಪ್ರಜಾಪ್ರಭುತ್ವದ ಮಾದರಿಯಾಗಿ ಉಳಿದಿದೆ. ಈ ಸಂದರ್ಭದಲ್ಲಿ ಅವರು ನಾರ್ವೆಯ ಮಾಜಿ ಸಚಿವರೂ ಹಾಗೂ ಮಾಜಿ ಸಂಸದರೂ ಆಗಿದ್ದ ಹಿಮಾಂಶು ಗುಲೇಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಭೇಟಿಯ ವೇಳೆ ನಾರ್ವೆಯ ಇತಿಹಾಸ, ಸಂವಿಧಾನ, ಆಡಳಿತ ವ್ಯವಸ್ಥೆ ಹಾಗೂ ಜನಪರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಎರಡೂ ರಾಷ್ಟ್ರಗಳ ಸಂಸತ್ತಿನ ಕಾರ್ಯನಿರ್ವಹಣಾ ವಿಧಾನಗಳು, ಜನತಾಂತ್ರಿಕ ಪ್ರಕ್ರಿಯೆಗಳ ವಿನ್ಯಾಸ ಹಾಗೂ ಸಂಸದೀಯ ಅಧಿವೇಶನಗಳ ನಿರ್ವಹಣೆ ಕುರಿತಂತೆ ಪರಸ್ಪರ ಅಭಿಪ್ರಾಯ ವಿನಿಮಯವೂ ನಡೆಯಿತು.

ಸ್ಪೀಕರ್ ಯು.ಟಿ ಖಾದರ್ ಅವರು, ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕರ್ನಾಟಕ ವಿಧಾನಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಹಾಗೂ ಸ್ಪೀಕರ್ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net