ಬ್ರಿಸ್ಬೇನ್‌ನಲ್ಲಿ ಟೆಸ್ಟ್​ನಲ್ಲಿ ನೆಟ್ ಬೌಲರ್ ವಾಷಿಂಗ್ಟನ್ ಸುಂದರ್ ಕಣಕ್ಕೆ?

washington web
Published on

ಬ್ರಿಸ್ಬೇನ್: ಮೆಲ್ಬೋರ್ನ್‌ನಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ರವೀಂದ್ರ ಜಡೇಜಾ ಎಡಗೈ ಹೆಬ್ಬೆರಳು ಕೀಲು ತಪ್ಪಿರುವುದರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಬ್ರಿಸ್ಬೇನ್‌ನಲ್ಲಿ ಅವರ ಸ್ಥಾನವನ್ನು ತಮಿಳುನಾಡಿನ ಸ್ಪಿನ್ ಬೌಲಿಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ತುಂಬಲಿದ್ದಾರೆ ಎನ್ನಲಾಗುತ್ತಿದೆ.

ವಾಷಿಂಗ್ಟನ್ ಸದ್ಯ ನೆಟ್ ಬೌಲರ್ ಆಗಿ ತಂಡದ ಜತೆಗಿದ್ದಾರೆ. ವಾಷಿಂಗ್ಟನ್ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲವರಾಗಿರುವುದರಿಂದ ಆಲ್ರೌಂಡರ್ ಕೋಟಾದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.

ಬ್ರಿಸ್ಬೇನ್ ಟೆಸ್ಟ್‌ಗೆ ಸಂಭಾವ್ಯ ಇಲೆವೆನ್:

ಶುಭಮಾನ್ ಗಿಲ್, ರೋಹಿತ್ ಶರ್ಮ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿ.ಕೀ), ಮಯಾಂಕ್ ಅಗರ್ವಾಲ್/ಪೃಥ್ವಿ ಷಾ, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಆಸೀಸ್‌ಗೆ ನಾ ಹೋಗುವೆ ಎಂದ ಸೆಹ್ವಾಗ್!

ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡಕ್ಕೆ 11 ಆಟಗಾರರ ಬಳಗ ಕಣಕ್ಕಿಳಿಸುವುದು ಕಷ್ಟವಾದರೆ ನಾನು ಆಸೀಸ್‌ಗೆ ಹೋಗಿ ಆಡುವೆ ಎಂದು ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮಂಗಳವಾರ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಇದನ್ನು ಅವರು ಬಿಸಿಸಿಐಗೂ ಟ್ಯಾಗ್ ಮಾಡಿದ್ದಾರೆ.

ರವೀಂದ್ರ ಜಡೇಜಾಗೆ ಶಸಚಿಕಿತ್ಸೆ

ಸಿಡ್ನಿ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೇಳೆ ಚೆಂಡೇಟಿನಿಂದ ಎಡಗೈ ಹೆಬ್ಬೆರಳು ಕೀಲು ತಪ್ಪಿಸಿಕೊಂಡಿದ್ದ ರವೀಂದ್ರ ಜಡೇಜಾ ಆಸೀಸ್‌ನಲ್ಲೇ ಯಶಸ್ವಿ ಶಸಚಿಕಿತ್ಸೆಗೆ ಒಳಗಾಗಿದ್ದಾರೆ. ಕೈಗೆ ಪ್ಲಾಸ್ಟರ್ ಹಾಕಿರುವ ಚಿತ್ರವನ್ನು ಜಡೇಜಾ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ಶೀಘ್ರವೇ ಪುಟಿದೆದ್ದು ಬರುವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net