

ಕುಂದಾಪುರ: ಕುಂದಾಪುರದ ಶಾಸ್ತ್ರಿ ಪಾರ್ಕ್ ಫ್ಲೈಓವರ್ ಅಡಿಯಲ್ಲಿ ರಾತ್ರಿ ವೇಳೆ ವಲಸೆ ಕಾರ್ಮಿಕರ ಜಗಳ, ಕುಡಿದ ಮತ್ತಿನಲ್ಲಿ ಹೊಡೆದಾಟ, ಅಲ್ಲಲ್ಲಿ ಮೂತ್ರ ವಿಸರ್ಜನೆ ಮಾಡಿ ಪರಿಸರ ಅಶುಚಿತ್ವ, ನಿದ್ರೆ, ವಿಶ್ರಾಂತಿ ಪಡೆಯುವುದು ಇವೆಲ್ಲದಕ್ಕೂ ಕಡಿವಾಣ ಬಿದ್ದಿದೆ. ಫ್ಲೈಓವರ್ನಡಿ ನಿದ್ರಿಸುವವರಿಗೆ ಧ್ವನಿವರ್ಧಕದ ಮೂಲಕ ಬುಧವಾರ ರಾತ್ರಿ ಎಚ್ಚರಿಕೆ ನೀಡಲಾಯಿತು.
ಕುಂದಾಪುರ ನಗರ ಪೊಲೀಸ್ ಇಲಾಖೆ, ಪುರಸಭೆ ಹಾಗೂ ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಶಾಸ್ತ್ರಿ ವೃತ್ತದ ಮೇಲ್ಸೇತುವೆ ಅಡಿಯಲ್ಲಿ ನಡೆಯುತ್ತ ಕೂಲಿ ಕಾರ್ಮಿಕರ ಈ ಎಲ್ಲ ಚಟುವಟಿಕೆಗಳಿಗೆ ನಿಬರ್ಂಧ ವಿಧಿಸಲಾಗಿದೆ. ವಲಸೆ ಕಾರ್ಮಿಕರ ಜಗಳದಿಂದ ರೋಸಿ ಹೋದ ನಾಗರಿಕರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು.
ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಪುರಸಭಾ ಸದಸ್ಯ ಪ್ರಭಾಕರ್, ಕುಂದಾಪುರ ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸಾದ್ ಕೆ., ಪುರಸಭೆ ಆರೋಗ್ಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರ ಸಿಐಟಿಯು ಸಂಚಲನ ಸಮಿತಿ ಖಂಡನೆ
ಶಾಸ್ತ್ರಿ ವೃತ್ತದ ಫ್ಲೈಓವರ್ ಕೆಳಗೆ ದುಡಿದು ಬಂದು ಮಲಗಿರುವ ವಲಸೆ ಕಾರ್ಮಿಕರನ್ನು ಬುಧವಾರ ರಾತ್ರಿ ತೆರವುಗೊಳಿಸಿ, ಮಲಗದಂತೆ ಎಚ್ಚರಿಕೆ ನೀಡಿರುವ ಕ್ರಮವನ್ನು ಕುಂದಾಪುರ ಸಿಐಟಿಯು ಸಂಚಲನ ಸಮಿತಿ ಖಂಡಿಸಿದೆ.
ನಗರದ ಕೆಲವು ಶ್ರೀಮಂತರ ಒತ್ತಡಕ್ಕೆ ಮಣಿದು ಏಕಾಏಕಿ ಈ ರೀತಿ ಕ್ರಮ ಕೈಗೊಂಡಿರುವುದು ಸಹಿಸಲು ಸಾಧ್ಯವಿಲ್ಲ. ವಲಸೆ ಕಾರ್ಮಿಕರ ದುಡಿಮೆಯಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗೆ ಸಹಾಯವಾಗುತ್ತಿರುವುದನ್ನು ಜಿಲ್ಲಾಡಳಿತ ಗಮನಿಸಬೇಕು. ತಮ್ಮ ಕುಟುಂಬಗಳ ನಿರ್ವಹಣೆಗಾಗಿ ವಲಸೆ ಬರುವ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ ಆಗಬೇಕೇ ಹೊರತು ಅವರ ಮೇಲೆ ಈ ರೀತಿ ದೌರ್ಜನ್ಯ ಎಸಗುವುದು ಸರಿಯಲ್ಲ ಎಂದು ಸಮಿತಿ ಸಂಚಾಲಕ ಚಂದ್ರಶೇಖರ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.