

ಬೆಂಗಳೂರು: ಹಸಿ ಮೀನು ಮಾರುವವರಿಗೆ ನೀಡಿರುವ ಎಚ್ಚರಿಕೆ ಫಲಕದ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದು ವೈರಲ್ ಕೂಡ ಆಗಲಾರಂಭಿಸಿದೆ. ಅಷ್ಟಕ್ಕೂ ಇಂಥದ್ದೊಂದು ಎಚ್ಚರಿಕೆಯನ್ನು ಹಸಿ ಮೀನು ವ್ಯಾಪಾರಸ್ಥರ ಸಂಘವೊಂದು ನೀಡಿದೆ.
ಈದ್ ಮಿಲಾದ್ ದಿನವಾದ ಸೆ. 28ರಂದು ಮೀನು ಮಾರಾಟ ಮಾಡಬಾರದು, ಅಂದು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ಮಾಡಬೇಕು ಎಂದು ಮಂಗಳೂರಿನ ಸೌತ್ವಾರ್ಫ್ ಬಂದರು ಪ್ರದೇಶದ ಹಸಿ ಮೀನು ವ್ಯಾಪಾರಸ್ಥರ ಸಂಘ ಸಂದೇಶ ರವಾನಿಸಿದೆ. ಮಾತ್ರವಲ್ಲ, ಈ ಕುರಿತು ದೊಡ್ಡದೊಂದು ಬ್ಯಾನರ್ ಕೂಡ ಹಾಕಿದೆ. ಇದೀಗ ಈ ಬ್ಯಾನರ್ ಫೋಟೋ ಎಲ್ಲೆಡೆ ಹರಿದಾಡಲಾರಂಭಿಸಿದ್ದು, ಚರ್ಚೆಗೆ ಒಳಗಾಗುತ್ತಿದೆ.
ಸೆ. 28ರ ಬೆಳಗ್ಗೆ 3.45ರ ನಂತರ ಹಸಿ ಮೀನು ವ್ಯಾಪಾರಿಗಳು ವ್ಯಾಪಾರ ಮಾಡದೆ ಕಡ್ಡಾಯವಾಗಿ ರಜೆ ಮಾಡಬೇಕು. ಒಂದು ವೇಳೆ ರಜೆ ಮಾಡದಿದ್ದರೆ ಅಂಥವರು ಒಂದು ತಿಂಗಳ ಕಾಲ ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಕಾನೂನುಕ್ರಮ ಕೈಗೊಳ್ಳುವ ಜೊತೆಗೆ ದಂಡನೆಯನ್ನು ವಿಧಿಸಬೇಕಾಗುತ್ತದೆ. ಅಲ್ಲದೆ ಸಂಘದ ಯಾವುದೇ ಸಹಕಾರದಿಂದ ವಂಚಿತರಾಬೇಕಾಗುತ್ತದೆ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘ ಎಚ್ಚರಿಕೆ ನೀಡಿದೆ.