

ಮುಂಬೈ: ಯುವತಿಯೊಬ್ಬಳು ಪ್ರವೇಶ ಇರದ ರಸ್ತೆಯಲ್ಲಿ ಬುಲೆಟ್ನಲ್ಲಿ ಬಂದಿದ್ದಲ್ಲದೆ ಪೊಲೀಸರಿಗೂ ಡೋಂಟ್ ಕೇರ್ ಎಂಬಂತೆ ರೋಷಾವೇಶದಿಂದ ವರ್ತಿಸಿದ್ದಾಳೆ. ಕೊನೆಗೂ ಪೊಲೀಸರು ಈಕೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶ ಮೂಲದ ಎಂಬ 26 ವರ್ಷದ ನೂಪುರ್ ಪಟೇಲ್ ಬಂಧಿತ ಯುವತಿ. ಈಕೆ ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ಪ್ರವೇಶ ಇರದಿದ್ದರೂ ಬುಲೆಟ್ನಲ್ಲಿ ಅದೂ ಹೆಲ್ಮೆಟ್ ಕೂಡ ಧರಿಸದೆ ಬಂದಿದ್ದಳು. ಈ ಸಂದರ್ಭದಲ್ಲಿ ಅಲ್ಲಿದ್ದ ಸಂಚಾರಿ ಪೊಲೀಸರು ತಡೆದಿದ್ದರು.
ತನ್ನನ್ನು ತಡೆದ ಪೊಲೀಸರಿಗೇ ಧಿಮಾಕಿನಿಂದ ಉತ್ತರಿಸಿದ್ದ ಈಕೆ ಗೂಂಡಾಗಿರಿ ತೋರಿದ್ದಳು. ನಿಯಮ ಉಲ್ಲಂಘಿಸಿದ್ದಲ್ಲದೆ, ಅಸಭ್ಯವಾಗಿ ಮಾತನಾಡಿದ್ದಳು. ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಅಂದಹಾಗೆ, ಸೆ. 15ರಂದು ಈ ಪ್ರಕರಣ ನಡೆದಿತ್ತು. -ಏಜೆನ್ಸೀಸ್