

Virat Kohli: ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್, 'ರನ್ ಮಷಿನ್' ವಿರಾಟ್ ಕೊಹ್ಲಿ ಸಾಧನೆ ಅಪಾರ. ದಿಗ್ಗಜ ಬ್ಯಾಟರ್ಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮುಂಚೂಣಿಯಲ್ಲಿರಿಸಿರುವ ಕಿಂಗ್ ಕೊಹ್ಲಿ, 51 ಏಕದಿನ ಪಂದ್ಯಗಳಲ್ಲಿ ಬರೋಬ್ಬರಿ 14,000 ರನ್ ದಾಖಲಿಸಿದ್ದಾರೆ. ಈ ಮೂಲಕ ಏಕದಿನ ಫಾರ್ಮೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಇಂದು (ಮಾ.02) ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಡಲಿರುವ ಭಾರತ ಪರ ವಿರಾಟ್ ಮತ್ತೊಂದು ಶತಕ ದಾಖಲಿಸಲಿ, ಮಗದೊಂದು ದಾಖಲೆ ಬರೆಯಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಟೆಸ್ಟ್ ಮತ್ತು ಟಿ20 ಫಾರ್ಮೆಟ್ನಲ್ಲಿಯೂ ಅದ್ಭುತ ಪ್ರದರ್ಶನ ತೋರುವ ವಿರಾಟ್, ಬಲಗೈ ಬ್ಯಾಟ್ಸ್‌ಮನ್ ಪೀಳಿಗೆಯ ಶ್ರೇಷ್ಠ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದಾರೆ. ಇಂದು ನ್ಯೂಜಿಲೆಂಡ್ ವಿರುದ್ಧ ತಮ್ಮ 300ನೇ ಏಕದಿನ ಪಂದ್ಯವನ್ನು ಆಡಲಿರುವ ಕೊಹ್ಲಿ ಕುರಿತು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಕಾರ್ ಯೂನಿಸ್ ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
"ತಮ್ಮ ವೃತ್ತಿಜೀವನದಲ್ಲಿ ವಿರಾಟ್ ಸಾಧನೆಗಳ ಮೈಲಿಗಲ್ಲು ತಲುಪಿದ್ದಾರೆ ಎಂಬುದರಲ್ಲಿ ಅನುಮಾನವೇ ಬೇಡ. ಅವರು ಶ್ರೇಷ್ಠ ಆಟಗಾರ. ತಂಡದ ಸ್ಟಾರ್ ಬ್ಯಾಟರ್ ಆಗಿ ರೋಹಿತ್ ಶರ್ಮ ಕೂಡ ಇದ್ದಾರೆ. ವಿರಾಟ್ ಮತ್ತು ರೋಹಿತ್ರನ್ನು ಹೊರತುಪಡಿಸಿ ಹೇಳುವುದಾದರೆ, ಇನ್ನಾರು ಅಷ್ಟು ಉತ್ತಮವಾಗಿಲ್ಲ. ಅಂದಿನ ಕಾಲಘಟ್ಟದಲ್ಲಿ ವೀರೇಂದ್ರ ಸೆಹ್ವಾಗ್, ಸಚಿನ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಎಲ್ಲರೂ ಉತ್ತಮ ಆಟಗಾರರಾಗಿದ್ದರು. ಇವರ ಸಮಯದಲ್ಲಿ ವಿರಾಟ್ ಏನಾದರೂ ಆಡಿದಿದ್ದರೆ, ಖಂಡಿತ ಈ ದಾಖಲೆ ಮತ್ತು ಇಷ್ಟೊಂದು ಜನಪ್ರಿಯತೆ ಗಳಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.
"ಕೊಹ್ಲಿ ಹೆಚ್ಚುವರಿ ರನ್ ಏನೋ ಸುಲಭವಾಗಿ ಗಳಿಸುತ್ತಿದ್ದರು. ಆದರೆ, ಸಚಿನ್ ಮತ್ತು ಇತರ ದಿಗ್ಗಜ ಬ್ಯಾಟರ್ಗಳನ್ನು ಸಂಪೂರ್ಣವಾಗಿ ಹಿಂದಿಕ್ಕಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಗರಿಷ್ಠ ದಾಖಲೆ ಹೊಂದಿದ್ದಾರೆ. ಅವರ ಕೊಡುಗೆಗಳು ಕೊಹ್ಲಿಗೆ ಪ್ರಾಮುಖ್ಯತೆ ಮತ್ತು ಆದ್ಯತೆ ಸಿಗಲು ಅವಕಾಶ ಮಾಡಿಕೊಡುತ್ತಿರಲಿಲ್ಲ" ಎಂದು ಯೂನಿಸ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).