68 ಜನರ ಸಾವಿಗೆ ಕಾರಣನಾಗಿದ್ದ ವಾಂಟೆಡ್ ನಕ್ಸಲವಾದಿ ಪೊಲೀಸರಿಗೆ ಶರಣು

naxal
Published on

ದಾಂತೇವಾಡ: ಮೂರು ಮಾರಣಾಂತಿಕ ಆಕ್ರಮಣ ಪ್ರಕರಣಗಳಲ್ಲಿ ವಾಂಟೆಡ್ಆಗಿದ್ದ ಆರೋಪಿಯೊಬ್ಬ ಸೇರಿದಂತೆ ಮೂವರು ನಕ್ಸಲವಾದಿಗಳು, ಛತ್ತೀಸಗಢದ ದಾಂತೇವಾಡ ಜಿಲ್ಲಾ ಪೊಲೀಸರಿಗೆ ಶರಣಾಗಿದ್ದಾರೆ. ಸ್ಥಳೀಯ ಗೊಂಡಿ ಉಪಭಾಷೆಯಲ್ಲಿ 'ಮನೆಗೆ ಹಿಂತಿರುಗಿ' ಎಂಬ ಅರ್ಥ ಹೊಂದಿರುವ 'ಲೋನ್ ವರ್ರತು' ಪುನರ್ವಸತಿ ಕಾರ್ಯಕ್ರಮದಡಿ ಈ ಬಂಡುಕೋರರು ಹಿಂಸೆಯ ಮಾರ್ಗ ತ್ಯಜಿಸಿ ಮತ್ತೆ ಮುಖ್ಯವಾಹಿನಿಗೆ ಸೇರಲು ಬಯಸಿದ್ದಾರೆ.

ಶರಣಾದವರಲ್ಲಿ ಒಬ್ಬನಾದ 35 ವರ್ಷದ ಸುರೇಶ್ ಕಡ್ತಿ, ಮಾವೋವಾದಿಗಳ ಪ್ಲಟೂನ್ ನಂಬರ್ 11 ರಲ್ಲಿ ಸೆಕ್ಷನ್ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 2007ರಲ್ಲಿ ಬಿಜಾಪುರದ ರಾಣಿಬೊದ್ಲಿ ಔಟ್​ಪೋಸ್ಟ್​ನ ಮೇಲೆ ಆಕ್ರಮಣ ನಡೆಸಿ 55 ಸುರಕ್ಷತಾ ಸಿಬ್ಬಿಂದಿಯ ಹತ್ಯೆ ಮಾಡಲಾಗಿದ್ದ ಪ್ರಕರಣದಲ್ಲಿ, 2006ರಲ್ಲಿ 7 ಸೈನಿಕರು ಮರಣಹೊಂದಿದ್ದ ಛತ್ತೀಸಗಢ ಆರ್ಮಡ್ ಫೋರ್ಸ್ ಕ್ಯಾಂಪಿನ ಮೇಲಿನ ಆಕ್ರಮಣ ಪ್ರಕರಣದಲ್ಲಿ ಮತ್ತು 2008 ರಲ್ಲಿ 6 ಸುರಕ್ಷತಾ ಸಿಬ್ಬಂದಿ ಮರಣಹೊಂದಿದ್ದ ಮೊದಕಪಾಲ್ ದಂಗೆ ಪ್ರಕರಣದಲ್ಲಿ, ಕಡ್ತಿ ವಾಂಟೆಡ್ ಆರೋಪಿ. ಅವನ ಬಗ್ಗೆ ಸುಳಿವು ಕೊಟ್ಟವರಿಗೆ 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಸಹ ಘೋಷಿಸಲಾಗಿತ್ತು ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.

ಶರಣಾಗಿರುವ ಮತ್ತೊಬ್ಬ ನಕ್ಸಲನ ಹೆಸರು ಸೋನು ಮದ್ಕಂ(25). ಈತ ಜನಮಿಲಿಷಿಯ ಸದಸ್ಯನಾಗಿ ರಸ್ತೆಗಳನ್ನು ಹಾಳು ಮಾಡುವ, ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ನಿರತವಾದ ವಾಹನಗಳಿಗೆ ಬೆಂಕಿ ಹಚ್ಚುವ ಮತ್ತು ಮಾವೋವಾದಿ ಪೋಸ್ಟರ್-ಬ್ಯಾನರ್ ಹಾಕುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದನೆಂದು ಹೇಳಲಾಗಿದೆ. ಮೂರನೆಯ ವ್ಯಕ್ತಿ, ಜೋಗಿ ಮಾರ್ಕಂ (27) ಎಂಬ ಮಹಿಳೆ. ಈಕೆ ಮಾವೋವಾದಿಗಳ ಸಾಂಸ್ಕೃತಿಕ ವಿಭಾಗವಾದ ಚೇತನ ನಾಟ್ಯ ಮಂಡಳಿಯ ಸದಸ್ಯೆಯಾಗಿದ್ದಳು ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ಮತ್ತು ಸಿ.ಆರ್.ಪಿ.ಎಫ್​ ಅಧಿಕಾರಿಗಳ ಮುಂದೆ ಶನಿವಾರ ಸಂಜೆ ಶರಣಾದ ಮೂವರು ಬಂಡುಕೋರರು, ಪೊಲೀಸರ ಪುನರ್ವಸತಿ ಅಭಿಯಾನ "ಲೋನ್ ವರ್ರತು"ದಿಂದ ಪ್ರಭಾವಿತರಾಗಿದ್ದಾರೆ; ಮತ್ತು 'ಟೊಳ್ಳಾದ' ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ದಾಂತೆವಾಡ ಜಿಲ್ಲೆಯಲ್ಲಿ ಲೊನ್ ವರ್ರತು ಅಭಿಯಾನದಡಿ ಪೊಲೀಸರಿಗೆ ಶರಣಾದ ನಕ್ಸಲರ ಸಂಖ್ಯೆ 319 ಕ್ಕೆ ಏರಿದೆ.

ಕಳೆದ ವರ್ಷ ಜೂನ್​ನಲ್ಲಿ ಆರಂಭವಾದ ಈ ಅಭಿಯಾನದಡಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವ ಬಂಡುಕೋರರಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯಾಭಿವೃದ್ಥಿ ತರಬೇತಿ ನೀಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ. ದಾಂತೇವಾಡಾ ಪೊಲೀಸರು, ಕನಿಷ್ಠ 1,600 ನಕ್ಸಲರ ಮೂಲಸ್ಥಳಗಳಾಗಿರುವ ಹಳ್ಳಿಗಳಲ್ಲಿ ಈ ಬಗ್ಗೆ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂದು ಪಲ್ಲವ ತಿಳಿಸಿದ್ದಾರೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net