ತಮಿಳುನಾಡು ತಂದೆ-ಮಗನ ಲಾಕ್​ ಅಪ್​ ಡೆತ್​: ಮತ್ತೊಂದು ಕಿಚ್ಚು ಹೊತ್ತಿಸಿ, ಸಸ್ಪೆಂಡ್ ಆದ ಪೊಲೀಸ್​ ಪೇದೆ

Police Pede
Published on

ನವದೆಹಲಿ: ತಮಿಳುನಾಡಿನ ಸಾಥುಕುಲಂನಲ್ಲಿ ಪೊಲೀಸರ ದೌರ್ಜನ್ಯಕ್ಕೆ ಅಪ್ಪ-ಮಗ ಮೃತಪಟ್ಟಿದ್ದಾರೆ. ತಂದೆ-ಮಗ ಲಾಕ್​ಡೌನ್​ ನಿಯಮ ಮೀರಿದ್ದರಿಂದ ಅವರನ್ನು ಠಾಣೆಯಲ್ಲಿ ಕೂಡಿಹಾಕಿದ ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ದೌರ್ಜನ್ಯಕ್ಕೆ ಇಬ್ಬರೂ ಜೀವ ತೆತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪೊಲೀಸರ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಈ ಬೆನ್ನಲ್ಲೇ ಪೊಲೀಸ್​ ಪೇದೆಯೋರ್ವ ಅಧಿಕ ಪ್ರಸಂಗತನದ ಪೋಸ್ಟ್​ವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಸಸ್ಪೆಂಡ್​ ಆಗಿದ್ದಾರೆ.

ಜಯರಾಜ್​ ಹಾಗೂ ಅವರ ಪುತ್ರ ಬೆನಿಕ್ಸ್​ ಎಂಬುವರು ಲಾಕ್​ಡೌನ್​ ನಿಯಮ ಉಲ್ಲಂಘಿಸಿ, ನೀಡಲಾಗಿದ್ದ ಅವಧಿಗೂ ಹೆಚ್ಚಿನ ಕಾಲ ತಮ್ಮ ಮೊಬೈಲ್​ ಅಂಗಡಿಯನ್ನು ತೆರೆದುಕೊಂಡೇ ಇದ್ದರು ಎಂಬ ಕಾರಣಕ್ಕೆ, ಸಾಥಕುಲಂ ಠಾಣೆಯ ಪೊಲೀಸರು ಅವರಿಬ್ಬರನ್ನೂ ಬಂಧಿಸಿದ್ದರು. ಹಾಗೆ ಬಂಧಿಸಿ ಠಾಣೆಗೆ ಕರೆದುಕೊಂಡು ಬಂದು ಹಿಗ್ಗಾಮುಗ್ಗಾ ಹೊಡೆದಿದ್ದರು. ಮೊದಲು ಬೆನಿಕ್ಸ್​ ಅಸ್ವಸ್ಥನಾಗಿದ್ದ. ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಅಂದೇ ರಾತ್ರಿ ಸಾವನ್ನಪ್ಪಿದ್ದ. ಅದರ ಮರುದಿನ ತಂದೆ ಜಯರಾಜ್​ ಕೂಡ ಮೃತಪಟ್ಟಿದ್ದರು.

ತಂದೆ ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂದೂ ಕೂಡ ಅಲ್ಲಿ ಇದೇ ವಿಚಾರಕ್ಕೆ ಜನರು ರೊಚ್ಚಿಗೆದ್ದಿದ್ದಾರೆ. ಪೊಲೀಸ್​ ಇಲಾಖೆ ತನ್ನ ತಪ್ಪು ಮುಚ್ಚಿ ಹಾಕುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: video/ ಮಾನವೀಯತೆ ಮೆರೆದ ಶಾಸಕ ರೇಣುಕಾರ್ಚಾರ್ಯ

ಹೀಗಿರುವಾಗ ತಮಿಳುನಾಡಿನ ಪೇದೆ ಎಂ.ಸತೀಶ್​ ಮುಥು ಎಂಬಾತ, 'ನಾವು ಮುಂದಿನ ಲಾಕಪ್​​​ ಡೆತ್​ಗಾಗಿ ಕಾಯುತ್ತಿದ್ದೇವೆ...' ಎಂದು ಪೋಸ್ಟ್​ ಹಾಕಿದ್ದ. ಅಷ್ಟೇ ಅಲ್ಲದೆ, ಅನುಚಿತ ಶಬ್ದವನ್ನೂ ಬಳಸಿದ್ದ.

ಆದರೆ ಈ ಪೋಸ್ಟ್​ನಿಂದ ತೀವ್ರ ವಿವಾದ ಸೃಷ್ಟಿಯಾಯಿತು. ಅನೇಕರು ಕೋಪದಿಂದ ಪ್ರತಿಕ್ರಿಯೆ ನೀಡಿದರು. ಆಗ ಬಿಸಿಯನ್ನು ಅರಿತ ಪೊಲೀಸ್​ ಪೇದೆ, ಈ ಪೋಸ್ಟ್​ನ್ನು ನನ್ನ ಟೈಂ ಲೈನ್​ನಲ್ಲಿ ಬೇರೆ ಯಾರೋ ಹಾಕಿದ್ದಾರೆ ಎಂದು ವಾದಿಸಲು ಪ್ರಾರಂಭಿಸಿದ.

ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದೇ ತಡ, ಆತನನ್ನು ಸಸ್ಪೆಂಡ್ ಮಾಡಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net