

ದಾವಣಗೆರೆ: ಹೊನ್ನಳ್ಳಿ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರೇ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಳಗಟ್ಟೆಯಲ್ಲಿ ಗಾಪಂ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮ ಮುಗಿಸಿಕೊಂಡು ಶಾಸಕ ಎಂ.ಪಿ.ರೇಣುಕಾಚಾರ್ಯ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಬೈಕ್ ಮತ್ತು ಕಾರು ಅಪಘಾತಕ್ಕೀಡಾಗಿದ್ದನ್ನು ಕಂಡ ಶಾಸಕರು ಕೂಡಲೇ ಸ್ಥಳಕ್ಕೆ ತೆರಳಿದರು. ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಹಾಗೂ ಹಿಂಬದಿ ಕುಳಿತಿದ್ದ ಅವರ ಪತ್ನಿಯನ್ನು ತನ್ನ ಎಸ್ಕಾರ್ಟ್ ವಾಹನದಲ್ಲಿ ಹೊನ್ನಾಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇದನ್ನೂ ಓದಿರಿ ಬೆಂಗಳೂರಿಗಾಗಿ ಸಚಿವರಿಬ್ಬರ ಮುಸುಕಿನ ಗುದ್ದಾಟ? ತಲ್ಲಣ ಮೂಡಿಸಿದೆ ಸುಧಾಕರ್ರ ‘ಸಂಡೇ ಥಾಟ್ಸ್’
ದೂರವಾಣಿ ಮೂಲಕ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ ಶಾಸಕರು, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಶೀಘ್ರವೇ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲು ಸೂಚಿಸಿದರು.
ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರಾದರೂ ನಿತ್ರಾಣವಾಗಿ ಬಿದ್ದರೆ ಅವರ ಕುಟುಂಬಸ್ಥರೇ ಸಹಾಯಕ್ಕೆ ಬರಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ಬೆಂಗಾವಲು ವಾಹನದ ಮೂಲಕ ಆಸ್ಪತ್ರೆ ಕಳುಹಿಸಿದ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.