

ವಿಜಯವಾಣಿ ಸುದ್ದಿಜಾಲ ಕಡಬ
ಶಿಕ್ಷಣದೊಂದಿಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಡಬ ತಾಲೂಕು ಕೊಡಿಂಬಾಳ ಗ್ರಾಮದ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆಯನ್ನು ಅಂಚೆ ಮತದಾನದ ಮೂಲಕ ನಡೆಸಿ ಯಶ ಕಂಡಿದೆ.
ಹಲವು ವರ್ಷಗಳಿಂದ ಮತದಾನದ ವಿವಿಧ ವಿಧಾನಗಳನ್ನು ಮಕ್ಕಳಿಗೆ ಪರಿಚಯಿಸುತ್ತಾ ಶಿಕ್ಷಣ ಇಲಾಖೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅಂಚೆ ಮತದಾನದ ಮೂಲಕ ಮಂತ್ರಿಮಂಡಲದ ಸದಸ್ಯರನ್ನು ಆಯ್ಕೆ ಮಾಡಲು ವ್ಯವಸ್ಥೆ ಮಾಡಲಾಯಿತು. ಜಿಪಿಟಿ ಶಿಕ್ಷಕ ದಿಲೀಪ್ಕುಮಾರ್ ಸಂಪಡ್ಕ ಈ ಹೊಸ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದಾರೆ.
ಹೇಗಿತ್ತು ತಯಾರಿ?: ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ ಮತ್ತು ದಿನಾಂಕಗಳನ್ನು ಪ್ರಕಟಸಲಾಯಿತು. ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಅವರಿಗೆ ನೀಡಿದ ಚಿಹ್ನೆಯನ್ನು ಹೊಂದಿರುವ ಮತಪತ್ರವನ್ನು ಮುದ್ರಿಸಿ ಮತಪತ್ರಗಳನ್ನು ವ್ಯವಸ್ಥಿತವಾಗಿ ಮಡಚಿ ಶಾಲೆಯ ಸ್ವವಿಳಾಸ ಹೊಂದಿದ ಅಂಚೆ ಲಕೋಟೆಯನ್ನು ಮಕ್ಕಳ ಮನೆಗೆ ಅಂಚೆ ಮೂಲಕ ಕಳುಹಿಸಲಾಯಿತು. ಇದರ ಜತೆಗೆ ಪಾಲಕರಿಗೆ ೋಷಣೆ ಪತ್ರವೊಂದನ್ನು ಜತೆಗಿರಿಸಲಾಯಿತು. ಅಂಚೆ ಮೂಲಕ ಮತಪತ್ರ ಮನೆಗೆ ತಲುಪಿದಾಗ ಮಕ್ಕಳೇ ಸ್ವತಃ ತೆರೆಯಬೇಕು. ೋಷಣಾ ಪತ್ರಕ್ಕೆ ಪಾಲಕರು ಸಹಿ ಮಾಡುವುದು ಕಡ್ಡಾಯವಾಗಿತ್ತು. ಈ ೋಷಣಾ ಪತ್ರದಲ್ಲಿ ಪಾಲಕರು ಮಕ್ಕಳಿಗೆ ಗೌಪ್ಯವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡುವ ಷರತ್ತು ವಿಧಿಸಲಾಗಿತ್ತು. ಪ್ರಕ್ರಿಯೆಗಳು ನಡೆದ ಬಳಿಕ ಶಾಲೆಗೆ ಅಂಚೆ ಮೂಲಕ ತಲುಪಿಸಬೇಕಾಗಿತ್ತು. ಅಂಚೆ ಮೂಲಕ ಬಂದ ಮತಪತ್ರವನ್ನು ಸಂಗ್ರಹಿಸಲಾಯಿತು. ನಿಗದಿತ ದಿನಾಂಕದ ಒಳಗೆ ಬಂದ ಮತಪತ್ರವನ್ನು ಮಾತ್ರ ಎಣಿಕೆಗೆ ಪರಿಗಣಿಸಲಾಯಿತು. ಶೇ.100 ಮತದಾನವಾಗಿತ್ತು. ಅಂಚೆ ರವಾನೆ ವೆಚ್ಚವನ್ನು ಶಿಕ್ಷಕರು ಭರಿಸಿದ್ದರು. ಮಂತ್ರಿಮಂಡಲದ ಚುನಾವಣೆಗೆ ‘ಓಂತ್ರಡ್ಕ ಮಕ್ಕಳ ಪಕ್ಷ’ ಮತ್ತು ‘ಪ್ರಜಾಪ್ರಭುತ್ವ ಮಕ್ಕಳ ಪಕ್ಷ’ ಎಂಬ ಎರಡು ಪಕ್ಷಗಳ ಅಡಿಯಲ್ಲಿ ಮಕ್ಕಳು ಚುನಾವಣೆಯಲ್ಲಿ ಭಾಗವಹಿಸಿದ್ದರು.
ಸಮಿಶ್ರ ಸರ್ಕಾರ ರಚನೆ
ಈ ವರ್ಷದ ಚುನಾವಣೆಯಲ್ಲಿ ಎರಡು ಪಕ್ಷಗಳು ತಲಾ ಐದು ಸ್ಥಾನಗಳನ್ನು ಪಡೆದಿರುವುದರಿಂದ ಎರಡು ಪಕ್ಷಗಳು ಬಹುಮತ ಸಾಧಿಸಲು ವಿಫಲವಾಗಿರುವುದರಿಂದ ಎರಡು ಪಕ್ಷಗಳು ಸೇರಿ ಸಮಿಶ್ರ ಸರ್ಕಾರ ರಚಿಸಬೇಕಾಯಿತು.
ಆಯ್ಕೆಯಾದವರು
ಕಾರ್ತಿಕ್ ಕೆ.- ಮುಖ್ಯ ಮಂತ್ರಿ, ಶ್ರವಣ್- ಉಪಮುಖ್ಯಮಂತ್ರಿ, ನಿಶಾಂತ್- ಗೃಹಮಂತ್ರಿ, ಲಕ್ಷ್ಮಣ- ಕೃಷಿ ಮಂತ್ರಿ, ಚೈತ್ರಾ- ವಾರ್ತಾಮಂತ್ರಿ, ಮೋಕ್ಷಿತ್ ಬಿ.- ಕ್ರೀಡಾ ಮಂತ್ರಿ, ಪ್ರೇಮ್ಕಿರಣ್- ಶಿಕ್ಷಣ ಮಂತ್ರಿ, ವೇಣುಗೋಪಾಲ- ನೀರಾವರಿ ಮಂತ್ರಿ, ಶ್ರಾವಣಿ ಕೆ.- ಆರೋಗ್ಯ ಮಂತ್ರಿ, ಸುವೀಕ್ಷಾ- ಸಾಂಸ್ಕೃತಿಕ ಮಂತ್ರಿ, ಫಾತಿಮತ್ ಸಫಾ- ಸಭಾಪತಿ, ಎಂ.ಪಲ್ಲವಿ- ಪ್ರತಿಪಕ್ಷ ನಾಯಕಿ, ಪ್ರತಿಪಕ್ಷದ ಸದಸ್ಯರು- ಶ್ವೇತಾ, ಶ್ರಾವಂತ್ ಕೆ., ಆಯಿಷಾಯತ್ ಶಿಫಾ, ಸುಕನ್ಯಾ, ಹರ್ಷಿತಾ, ಮಹಮ್ಮದ್ ರಾಝಿಮ್, ಚೈತ್ರಾ ಎಲ್.ವಿ. ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ ಚುನಾವಣಾಧಿಕಾರಿಯಾಗಿದ್ದರು.
ಸರ್ಕಾರಿ ನೌಕರರಿಗೆ ಇರುವಂತಹ ಅಂಚೆ ಮತದಾನದ ಪರಿಚಯವನ್ನು ಮಕ್ಕಳಿಗೆ ಈ ಚಟುವಟಿಕೆ ಮೂಲಕ ನೀಡಲಾಗಿದೆ. ವಿಭಿನ್ನ ರೀತಿಯ ಚುನಾವಣಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ, ಪಾಲಕರಿಂದ ಬೆಂಬಲ ವ್ಯಕ್ತವಾಗಿದೆ. ನೀಲಯ್ಯ ನಾಯ್ಕ ಓಂತ್ರಡ್ಕ ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಕೆಲವು ವರ್ಷಗಳ ಹಿಂದೆ ಇವಿಎಂ ಆ್ಯಪ್ ಮೂಲಕ ಮತದಾನ ಮಾಡಲಾಗಿತ್ತು. ಕಳೆದ ವರ್ಷ ಆನ್ಲೈನ್ ಮತದಾನ ಕಲ್ಪನೆ ಮೂಡಿಸಲಾಗಿತ್ತು. ಈ ವರ್ಷ ಅಂಚೆ ಮತದಾನ ಪರಿಚಯಿಸಲಾಗಿದೆ. ಮಕ್ಕಳಿಗೆ ಎಲ್ಲ ವಿಧದ ಮತದಾನದ ಕಲ್ಪನೆಯನ್ನು ನೈಜವಾಗಿ ಅರ್ಥೈಸುವುದು ಉದ್ದೇಶ. ದಿಲೀಪ್ ಕುಮಾರ್ ಸಂಪಡ್ಕ ಜಿಪಿಟಿ ಶಿಕ್ಷಕ