ಸಿನಿಮಾ

ಮತದಾರರ ಹೊಣೆ: ಸಾರ್ವಜನಿಕರ ಮತ ಅಪಾತ್ರದಾನ ಆಗಬಾರದು

ರಾಜ್ಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಸಾಯಂಕಾಲ ಮುಕ್ತಾಯಗೊಂಡಿದ್ದು, ಆಯಾ ಕ್ಷೇತ್ರದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರು ಕ್ಷೇತ್ರದಿಂದ ಹೊರಗೆ ತೆರಳಬೇಕಾಗುತ್ತದೆ. ಮನೆಮನೆಗೆ ತೆರಳಿ ಪ್ರಚಾರ ಮಾಡಲು ಇದೊಂದು ದಿನ ಅವಕಾಶವಿದ್ದು, ರಾಜಕಾರಣಿಗಳ ಚಿತ್ತ ಅತ್ತ ನೆಟ್ಟಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ರಾಜಕಾರಣಿಗಳ ಪ್ರಚಾರ ನೇಪಥ್ಯಕ್ಕೆ ಸರಿಯುತ್ತಿದ್ದು, ಮತದಾರರ ಮಹತ್ವದ ಪಾತ್ರ ಇನ್ನು ಬಾಕಿ ಇದೆ. ಹಾಗೆನೋಡಿದರೆ, ಈ ಸಲದ ಪ್ರಚಾರ ಕಣ ಭರ್ಜರಿಯಾಗಿಯೇ ರಂಗೇರಿತ್ತು. ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಅನೇಕ ನಾಯಕರು ಹಾಗೂ ಕಾಂಗ್ರೆಸ್​ನಲ್ಲಿ ರಾಹುಲ್ ಗಾಂಧಿ ಸೇರಿ ಹಲವು ಮುಂದಾಳುಗಳು ಪ್ರಚಾರದ ಮುಂಚೂಣಿಯಲ್ಲಿದ್ದರು. ಪ್ರಚಾರ ಸಭೆಗಳು, ರೋಡ್ ಶೋಗಳ ಅಬ್ಬರ ಕಂಡುಬಂತು. ಚುನಾವಣೆಗಳನ್ನು ಪ್ರಜಾತಂತ್ರದ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಈ ಸಂಭ್ರಮ ಒಂದು ತೂಕ ಹೆಚ್ಚೇ ಎನ್ನಬಹುದು. ಇಷ್ಟು ಪ್ರಾದೇಶಿಕ, ಸಾಂಸ್ಕೃತಿಕ, ಜನಾಂಗೀಯ ವೈವಿಧ್ಯ ಇರುವ ದೇಶ ಮತ್ತೊಂದಿಲ್ಲ. ಹಾಗೇ ಭಿನ್ನ ಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುವ ರಾಜಕೀಯ ಪಕ್ಷಗಳ ಸಂಖ್ಯೆಯೂ ಹೆಚ್ಚು. ಈ ಸನ್ನಿವೇಶದಲ್ಲಿಯೂ ಪ್ರಜಾಪ್ರಭುತ್ವ ರಥ ಏರಿಳಿತಗಳ ನಡುವೆಯೂ ಸಾಗಿಬಂದಿರುವುದು ಹೆಗ್ಗಳಿಕೆಯೇ ಹೌದು. ಹೀಗಿದ್ದರೂ ಆತ್ಮಾವಲೋಕನವೂ ಬೇಕಾಗುತ್ತದೆ.

ಚುನಾವಣಾ ಪ್ರಚಾರ ಕಣ ಎಂದರೆ ಅಲ್ಲಿ ಒಂದಷ್ಟು ವೀರಾವೇಶದ ಭಾಷಣ, ಸ್ವಪ್ರಶಂಸೆ, ಎದುರಾಳಿಗಳ ಟೀಕೆಟಿಪ್ಪಣಿ ಇವೆಲ್ಲ ಇರಬೇಕಾಗುತ್ತದೆ. ಆದರೆ ಇದು ಒಂದು ಹಂತ ಮೀರಬಾರದು ಎಂಬುದು ನೀತಿಸಂಹಿತೆ. ಈ ಮಿತಿಯನ್ನು ಮೀರಿದ ಒಂದಷ್ಟು ಪ್ರಸಂಗಗಳು ಈ ಬಾರಿ ಕಾಣಿಸಿದ್ದು ಖೇದಕರ. ಇದೇನೇ ಇದ್ದರೂ, ಮತದಾರರು ಇನ್ನು ಮುಖ್ಯ ಭೂಮಿಕೆ ನಿಭಾಯಿಸಬೇಕಿದೆ.

ರಾಜಕೀಯ ಪಕ್ಷಗಳು ಗೆಲುವನ್ನೇ ಮುಖ್ಯವಾಗಿಟ್ಟುಕೊಂಡು ತಮ್ಮದೇ ಆದ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಅದರಲ್ಲೂ ಈಚಿನ ವರ್ಷಗಳಲ್ಲಿ ಅರ್ಹತೆಯ ಮಾನದಂಡದ ಬದಲು ಹಣಬಲ, ತೋಳ್ಬಲ ಇತ್ಯಾದಿ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂಬ ವ್ಯಾಪಕವಾದ ಆಕ್ಷೇಪಗಳಿವೆ. ಈ ಹಿನ್ನೆಲೆಯಲ್ಲಿಯೇ ಚುನಾವಣಾ ಸುಧಾರಣೆ ಬಗ್ಗೆ ಬಲವಾದ ಆಗ್ರಹಗಳಿರುವುದು. ರಾಜಕೀಯ ಪಕ್ಷಗಳು ಗೆಲುವಿಗೆ ಪ್ರಾಮುಖ್ಯ ನೀಡಬೇಕಾದುದು ಸಮರ್ಥನೀಯವೇ ಹೌದಾದರೂ ಅರ್ಹತೆಯ ವಿಷಯದಲ್ಲಿ ವಿಪರೀತ ಹೊಂದಾಣಿಕೆ ಮಾಡಿಕೊಂಡರೆ ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಆಗುವುದನ್ನು ಮನಗಾಣಬೇಕು. ಜನರಲ್ಲಿ ರಾಜಕೀಯ ರಂಗದ ಬಗ್ಗೆ ಒಂದು ರೀತಿಯ ಉದಾಸೀನ ಬೆಳೆಯಲು ಇದೂ ಒಂದು ಕಾರಣ. ಈ ಪರಿಸ್ಥಿತಿ ಬಹುಕಾಲ ಮುಂದುವರಿದರೆ ನಮಗೇ ಹಾನಿ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ‘ಮತ’ ಎಂಬುದು ಒಂದು ಪ್ರಬಲ ಅಸ್ತ್ರ. ಹಾಗೆಂದು ಪದೇಪದೇ ಈ ಅಸ್ತ್ರವನ್ನು ಬಳಸಲು ಸಾಧ್ಯವಿಲ್ಲ. ಹೀಗಾಗಿ ಬಳಸುವ ಸಂದರ್ಭ ಬಂದಾಗ ಅದು ವ್ಯರ್ಥವಾಗದಂತೆ ನೋಡಿಕೊಳ್ಳುವ ವಿವೇಚನೆ ಪ್ರದರ್ಶಿಸಬೇಕಾಗುತ್ತದೆ. ಈಗ ಅಂಥದೊಂದು ಸಂದರ್ಭ ಒದಗಿದೆ. ಹಾಗೇ ಅಮೂಲ್ಯವಾದ ಮತವು ಅಪಾತ್ರದಾನವಾಗದಂತೆಯೂ ಎಚ್ಚರ ಅಗತ್ಯ.

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

Latest Posts

ಲೈಫ್‌ಸ್ಟೈಲ್