ಲೈವ್ ಪಂದ್ಯದ ವೇಳೆ 'ಧಮ್' ಹೊಡೆದ ಪಾಕ್ ಆಟಗಾರ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

cricket new
Published on

ಪಾಕಿಸ್ತಾನ: ಪಾಕಿಸ್ತಾನ್ ಸೂಪರ್ ಲೀಗ್ 2024 (PSL 2024) ರ ಫೈನಲ್‌ನಲ್ಲಿ ಅತ್ಯಂತ ಮುಜುಗರದ ದೃಶ್ಯವೊಂದು ಕಂಡುಬಂದಿದೆ. ಇಸ್ಲಾಮಾಬಾದ್ ಯುನೈಟೆಡ್‌ನ ಸ್ಟಾರ್ ಆಲ್‌ರೌಂಡರ್ ಇಮಾದ್ ವಾಸಿಮ್ ಪಿಎಸ್‌ಎಲ್ ಚಾಂಪಿಯನ್. ಆದರೆ ಅವರು ಲೈವ್ ಫೈನಲ್‌ನಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಡ್ರೆಸ್ಸಿಂಗ್ ರೂಮ್‌ಗಳು ಕ್ರಿಕೆಟ್ ಆಟಗಾರರು ಒಟ್ಟಿಗೆ ಕುಳಿತು ಅನೇಕ ಒಳ್ಳೆಯ ಕೆಲಸಗಳನ್ನು ಮಾಡುವ ಸ್ಥಳಗಳಾಗಿವೆ. ಆದರೆ ಇಮಾದ್ ವಾಸಿಮ್ ಇಲ್ಲಿ ಸಿಗರೇಟ್ ಸೇದಿದ್ದಾರೆ.

ಇಮಾದ್‌ರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇಮಾದ್ ವಾಸಿಂ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಎಡಗೈಯಿಂದ ಸಿಗರೇಟ್ ಸೇದುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಧಮ್ ಹೊಡೆದ ನಂತರ ತನ್ನ ಕಡೆ ಕ್ಯಾಮೆರಾ ತಿರುಗಿದೆ ಎಂದು ಇಮಾದ್ ಬಹುಶಃ ಅರಿತುಕೊಳ್ಳುತ್ತಾರೆ. ಇದರಿಂದಾಗಿ ಅವರು ಮೆಲ್ಲನೆ ಸಿಗರೇಟ್ ಅನ್ನು ಮರೆಮಾಡುತ್ತಾರೆ. ನಂತರ ನಿಧಾನವಾಗಿ ಹೊಗೆಯನ್ನು ಹೊರಹಾಕುತ್ತಾರೆ. ಇಮಾದ್‌ರ ಈ ಕೃತ್ಯಗಳೆಲ್ಲಾ ಸಂಪೂರ್ಣವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೊದಲ ಇನಿಂಗ್ಸ್‌ನಲ್ಲಿ ಇಮಾದ್ ಈ ಕೆಲಸ ಮಾಡಿದರು ಎಂದು ತಿಳಿದುಬಂದಿದೆ.

ಆದರೂ ಬೌಲಿಂಗ್ ಮಾಡುವಾಗ ಇಮಾದ್ ಅದ್ಭುತವಾಗಿ ಆಡಿದರು. ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಲು ಬಂದ ಮುಲ್ತಾನ್ ಸುಲ್ತಾನ್ ತಂಡದ ಒಟ್ಟು ಐವರು ಬ್ಯಾಟ್ಸ್ ಮನ್ ಗಳನ್ನು ಇಮಾದ್ ಔಟ್ ಮಾಡಿದರು. 4 ಓವರ್‌ಗಳಲ್ಲಿ ಕೇವಲ 23 ರನ್​​​ಗೆ 5 ವಿಕೆಟ್ ಪಡೆದರು.

ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದರು. ನಂತರ ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್‌ಗೆ ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಈ ವೇಳೆ ಇಮಾದ್ ವಾಸಿಂ ಮತ್ತು ನಸೀಮ್ ಶಾ ಕ್ರೀಸ್‌ನಲ್ಲಿದ್ದರು. ಕ್ರಮೇಣ ಇಬ್ಬರೂ ಸೇರಿ 4 ಎಸೆತಗಳಲ್ಲಿ 7 ರನ್ ಗಳಿಸಿದರು. ಇನ್ನು 2 ಎಸೆತಗಳಲ್ಲಿ 1 ರನ್ ಅಗತ್ಯವಿದ್ದು, ಕ್ರೀಸ್ ನಲ್ಲಿದ್ದ ನಸೀಮ್ ಶಾ ಐದನೇ ಎಸೆತದಲ್ಲಿ ಔಟಾದರು. ನಂತರ ಹುನೈನ್ ಷಾ 1 ಎಸೆತದಲ್ಲಿ 1 ರನ್ ಗಳಿಸಬೇಕಾಗಿತ್ತು, ಆದರೆ ಅವರು ನೇರ ಬೌಂಡರಿ ಬಾರಿಸುವ ಮೂಲಕ ತಮ್ಮ ತಂಡವನ್ನು ಜಯಗಳಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net