

Akhilesh Yadav: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ (ಆಗಸ್ಟ್ 30) ಬಿಹಾರದ ಸರನ್ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ 'ಮತದಾರ ಅಧಿಕಾರ ಯಾತ್ರೆ'ಗೆ ಜೊತೆಯಾದರು.
ದೇಶದಲ್ಲಿ ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಮತಗಳ್ಳತನದಲ್ಲಿ ತೊಡಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು, ಜೊತೆಗೆ ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ವಿರೋಧಿಸಿ ಜಾಗೃತಿ ಮೂಡಿಸಲು ಬಿಹಾರದಲ್ಲಿ ರಾಹುಲ್ ಗಾಂಧಿ ಮತದಾರರ ಅಧಿಕಾರ ಯಾತ್ರೆಯನ್ನು ನಡೆಸುತ್ತಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆ ಸೇರಿ ಅಖಿಲೇಶ್ ಯಾದವ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಕೂಡ ಅಲ್ಲಿ ಹಾಜರಿದ್ದರು. ಕಳೆದ ಚುನಾವಣೆಯಲ್ಲಿ ಸರನ್ ಕ್ಷೇತ್ರದಿಂದ ರೋಹಿಣಿ ಆಚಾರ್ಯ ಪರಾಭವಗೊಂಡಿದ್ದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, "ಇಂದು ಬೆಳಿಗ್ಗೆ ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಜೀ ಸರನ್‌ನಲ್ಲಿ ನಡೆದ ಮತದಾರರ ಅಧಿಕಾರ ಯಾತ್ರೆಯಲ್ಲಿ ನಮ್ಮ ಸೇರಿಕೊಂಡರು. ಪ್ರಜಾಪ್ರಭುತ್ವವನ್ನು ರಕ್ಷಿಸುವ ಈ ಐತಿಹಾಸಿಕ ಆಂದೋಲನಕ್ಕೆ ಅವರನ್ನು ಸ್ವಾಗತಿಸಲಾಯಿತು. ಬಿಜೆಪಿ ನಮ್ಮ ಪ್ರಜಾಪ್ರಭುತ್ವವನ್ನು ನಾಶಮಾಡುವುದರ ವಿರುದ್ಧದ ಹೋರಾಟದಲ್ಲಿ ಅವರು ದೃಢ ಮಿತ್ರರಾಗಿದ್ದಾರೆ. ಯುಪಿ ಮತ್ತು ದೇಶಾದ್ಯಂತ ಬಡವರು ಮತ್ತು ಹಿಂದುಳಿದವರಿಗೆ ಬಲವಾದ ಧ್ವನಿಯಾಗಿದ್ದಾರೆ" ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ವಿರೋಧಿಸಿ ಗಾಂಧಿಯವರು ಆಗಸ್ಟ್ 17 ರಂದು ರೋಹ್ತಾಸ್ ಜಿಲ್ಲೆಯ ಸಸಾರಾಮ್‌ನಿಂದ ಕಾಂಗ್ರೆಸ್‌ನ 'ಮತದಾರ ಅಧಿಕಾರ ಯಾತ್ರೆ'ಯನ್ನು ಪ್ರಾರಂಭಿಸಲಾಗಿದೆ. ಇಂಡಿಯಾ ಕೂಟದ ಬೆಂಬಲದೊಂದಿಗೆ ನಡೆಯುವ ಈ ಯಾತ್ರೆ ಸೆಪ್ಟೆಂಬರ್ 1 ರಂದು ಪಾಟ್ನಾದಲ್ಲಿ ಮುಕ್ತಾಯಗೊಳ್ಳಲಿದೆ.
ಯಾತ್ರೆಯು ಇದುವರೆಗೆ ಗಯಾಜಿ, ನವಾಡ, ಶೇಖ್‌ಪುರ, ಲಖಿಸರೈ, ಮುಂಗೇರ್, ಕತಿಹಾರ್, ದರ್ಭಾಂಗ, ಮಧುಬನಿ, ಸೀತಾಮರ್ಹಿ, ಮುಜಾಫರ್‌ಪುರ್, ಪೂರ್ಣಿಯಾ, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಪೂರ್ವ ಚಂಪಾರಣ್ ಮತ್ತು ಸಿವಾನ್ ಜಿಲ್ಲೆಗಳನ್ನು ಒಳಗೊಂಡಿದೆ. ಇದು ಭೋಜ್‌ಪುರ ಮತ್ತು ಪಾಟ್ನಾ ಮೂಲಕ ಹಾದುಹೋಗುತ್ತದೆ. (ಏಜೆನ್ಸೀಸ್)