

ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ ಫೈಲ್ಸ್' ಚಿತ್ರವು 69ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಿತ್ರಕ್ಕಾಗಿ ಈ ಸಿನಿಮಾ ನರ್ಗೀಸ್ ದತ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರನ್ನು ಇಂದು (ಆಗಸ್ಟ್ 24) ಸಂಜೆ 5 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಯಿತು. ದೇಶದಾದ್ಯಂತ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಘೋಷಿಸಲಾಗುತ್ತದೆ.
1990ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತರ ವಲಸೆ ಹಾಗೂ ಉಗ್ರವಾದದ ಕುರಿತ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ರಚಿಸಿ ನಿರ್ದೇಶಿಸಿದ್ದರು. 2022ರ ಮಾರ್ಚ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
ಚಿತ್ರ ಬಿಡುಗಡೆಯಾದ ಹೊಸದರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಕೆಲವರು ಕೋಮು ಸೌಹಾರ್ದತೆ ಹಾಗೂ ಧಾರ್ಮಿಕ ಭಾವನೆಗಳಿಗೆ ಈ ಚಿತ್ರ ಧಕ್ಕೆ ಉಂಟು ಮಾಡುತ್ತದೆ ಎಂದು ಆರೋಪಿಸಿದ್ದರು. ಈ ಚಿತ್ರವು ವಾಸ್ತವಾಂಶವನ್ನು ಮರೆಮಾಚಿ ಹಿಂದೂ-ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ವಿಪಕ್ಷ ನಾಯಕರು ಆರೋಪಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಚಿತ್ರವನ್ನು ಹಾಡಿ ಹೊಗಳಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿತ್ತು.