ತವರಿಗೆ ಮರಳದ ವಿಶ್ವನಾಥನ್ ಆನಂದ್

viswanath ananda mar 20
Published on

ಚೆನ್ನೈ: ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಕರೊನಾ ಭೀತಿಯಿಂದಾಗಿ ವಿಮಾನ ಪ್ರಯಾಣ ಮಾಡಲು ಸಾಧ್ಯವಾಗದೆ ಭಾರತಕ್ಕೆ ಮರಳುವುದನ್ನೇ ಮುಂದೂಡಿದ್ದಾರೆ. ಜರ್ಮನಿಯಲ್ಲಿ ಬುಂಡೆಸ್​ಲಿಗಾ ಚೆಸ್ ಲೀಗ್​ನಲ್ಲಿ ಆಡಲು ತೆರಳಿದ್ದ ವಿಶ್ವನಾಥನ್ ಆನಂದ್ ಸೋಮವಾರ ಚೆನ್ನೈಗೆ ಮರಳಬೇಕಾಗಿತ್ತು. ಆದರೆ ಪ್ರಯಾಣ ನಿರ್ಬಂಧದಿಂದಾಗಿ ಆನಂದ್ ಜರ್ಮನಿಯಲ್ಲೇ ಉಳಿದು ಕೊಳ್ಳಲಿದ್ದು, ಫಿಡೆ ಕ್ಯಾಂಡಿಡೇಟ್ ಟೂರ್ನಿಯ ವೀಕ್ಷಕವಿವರಣೆಯ ಕೆಲಸವನ್ನು ಅಲ್ಲಿಂದಲೇ ನಿರ್ವಹಿಸಲಿದ್ದಾರೆ. ಇದು ಅವರ ಮೊಟ್ಟಮೊದಲ ವೀಕ್ಷಕ ವಿವರಣೆ ಜವಾಬ್ದಾರಿಯಾಗಿದೆ.

50 ವರ್ಷದ ಆನಂದ್ ಸದ್ಯ ಜರ್ಮನಿ ಫ್ರಾಂಕ್​ಫರ್ಟ್ ನಗರದಲ್ಲಿ ಉಳಿದುಕೊಂಡಿದ್ದಾರೆ ಎಂದು ಅವರ ಪತ್ನಿ ಅರುಣಾ ತಿಳಿಸಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸೆನ್​ಗೆ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸವಾಲೆಸೆಯುವ ಆಟಗಾರನನ್ನು ಆಯ್ಕೆ ಮಾಡುವ ಕ್ಯಾಂಡಿಡೇಟ್ ಚೆಸ್ ಟೂರ್ನಿ, ಕರೊನಾ ಭೀತಿಯ ನಡುವೆಯೂ ರಷ್ಯಾದ ಯಕಟರಿನ್​ಬರ್ಗ್​ನಲ್ಲಿ ನಿಗದಿಯಂತೆಯೇ ಮಂಗಳವಾರದಿಂದ ನಡೆಯಲಿದೆ.

ಆನಂದ್ ವೆಬ್​ಸೈಟ್ ಮೂಲಕ ವೀಕ್ಷಕವಿವರಣೆ ಕೆಲಸವನ್ನು ನಿರ್ವಹಿಸಲಿದ್ದಾರೆ. ಹೀಗಾಗಿ ಅವರು ಬಿಜಿಯಾಗಿರಲಿದ್ದಾರೆ. ಕರೊನಾ ಬಗ್ಗೆ ಅವರು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಅರುಣಾ ತಿಳಿಸಿದ್ದಾರೆ. ಮೊಬೈಲ್ ಮತ್ತು ವಿಡಿಯೋ ಕಾಲ್​ಗಳ ಮೂಲಕ ಆನಂದ್, ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಜರ್ಮನಿಯಲ್ಲಿ ಇದುವರೆಗೆ 5 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ.

ಫೆಬ್ರವರಿಯಲ್ಲೇ ಜರ್ಮನಿಗೆ ತೆರಳಿದ್ದ ಆನಂದ್, ಕಳೆದ ಒಂದು ವಾರದಿಂದ ಸ್ವಯಂ ಗೃಹಬಂಧನದಲ್ಲಿ ಏಕಾಂಗಿಯಾಗಿದ್ದಾರೆ. ‘ಇದೊಂದು ವಿಚಿತ್ರ ಅನುಭವ. ಬಹುತೇಕ ಇತರೆಲ್ಲ ಜನರಂತೆ ನಾನೂ ಇದೇ ಮೊದಲ ಬಾರಿಗೆ ನನ್ನ ಜೀವನದಲ್ಲಿ ಈ ರೀತಿ ಏಕಾಂಗಿಯಾಗಿ ಬದುಕುತ್ತಿದ್ದೇನೆ’ ಎಂದು ಆನಂದ್ ಹೇಳಿದ್ದಾರೆ. ಪರಿಸ್ಥಿತಿ ಸುಧಾರಿಸಿದರೆ ಮಾಸಾಂತ್ಯದಲ್ಲಿ ತವರಿಗೆ ವಾಪಸಾಗುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net