

ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ (ಗುರುವಾರ, ಶುಕ್ರವಾರ) ಶ್ರೀ ಶಿರಡಿ ಸಾಯಿಬಾಬಾ ಮೂಲ ಪಾದುಕೆ ದರ್ಶನವನ್ನು ಏರ್ಪಡಿಸಲಾಗಿದೆ. ಕೋಟ್ಯಾಂತರ ಭಕ್ತರ ಆರಾಧ್ಯ ದೈವವಾಗಿರುವ ಶಿರಡಿ ಸಾಯಿಬಾಬಾ ಮಂದಿರಗಳು ದೇಶದಾದ್ಯಂತ ಇವೆ. ಅಂತೆಯೇ ಮಲ್ಲೇಶ್ವರದ ಸಂಪಿಗೆ ರಸ್ತೆ 14ನೇ ಅಡ್ಡರಸ್ತೆಯಲ್ಲಿರುವ ಶ್ರೀಸಾಯಿಬಾಬಾ ಮಂದಿರವು ಬೆಂಗಳೂರಿನ ಬಾಬಾ ಭಕ್ತರ ಪಾಲಿಗೆ ಶ್ರದ್ಧೆಯ ಕೇಂದ್ರವಾಗಿದೆ. ಇದೇ ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾಯಿಬಾಬಾ ಮೂಲ ಪಾದುಕೆಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ ಎಂದು ಶ್ರೀಸಾಯಿ ಮಂಡಳಿ ಅಧ್ಯಕ್ಷ ಡಾ.ನಾಗೇಶ್ ಹಾಗೂ ಶ್ರೀಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋರಕ್ಷ ಗಡಿಲ್ಕರ್ ತಿಳಿಸಿದ್ದಾರೆ. ಶಿರಡಿ ಸಾಯಿಬಾಬಾರವರ ಮೂಲ ಪಾದುಕೆಗಳನ್ನು ಬೆಂಗಳೂರಿನ ಭಕ್ತರಿಗೆ ದರ್ಶನ ಮಾಸುವುದಕ್ಕಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಹಕಾರದಲ್ಲಿ ಮಲ್ಲೇಶ್ವರದ ಶ್ರೀ ಸಾಯಿ ಮಂಡಳಿಯು ಬಾಬಾರವರ ಮೂಲ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತರ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಂಡಳಿಯ ಸದಸ್ಯರು ಕೋರಿದ್ದಾರೆ.
ಮಲ್ಲೇಶ್ವರದ ಸಂಪಿಗೆ ರಸ್ತೆಯ ಶ್ರೀ ಸಾಯಿಬಾಬಾ ಮಂದಿರವನ್ನು ನಿರ್ವಹಿಸುತ್ತಿರುವ ಶ್ರೀ ಸಾಯಿ ಮಂಡಳಿಯು ಧಾರ್ಮಿಕ ಚಟುವಟಿಕೆಗಳ ಜೊತೆಗೆ ಭಕ್ತರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯದ ವಿವಿಧ ಸೇವೆಗಳನ್ನು ನೀಡುತ್ತಿದೆ. ಅನ್ನಬ್ರಹ್ಮ ಯೋಜನೆಯಡಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಆಯ್ದ 87 ಸರ್ಕಾರಿ ಶಾಲೆಯ 8 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, 5 ಸಾವಿರ ಮಕ್ಕಳಿಗೆ ಹಾಲು ವಿತರಣೆ, ಅಂಗವಿಕರು, ವೃದ್ಧಾಶ್ರಮದಲ್ಲಿರುವವರಿಗೆ ಪೌಶ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ. ಆರೋಗ್ಯ ಲಕ್ಷ್ಮಿ ಯೋಜನೆಯ ಮೂಲಕ ಪ್ರತಿಷ್ಠಿತ ರಾಮಯ್ಯ ಆಸ್ಪತ್ರೆ ಸಹಯೋಗದಲ್ಲಿ ಸೀರೋಗ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣಿನ ತಪಾಸಣೆ ಮತ್ತು ಶಸಚಿಕಿತ್ಸೆ, ಪಲ್ಸ್ ಪೊಲೀಯೋ ಅಭಿಯಾನ, ವಿವಿಧ ಔಷಧಿಗಳ ವಿತರಣೆ ಹಾಗೂ ಕೆ.ಜಿ.ಜನರಲ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರಗಳನ್ನು ಟ್ರಸ್ಟ್ ನಡೆಸುತ್ತಿದೆ. ವಿದ್ಯಾಶಾರದಾ ಕಾರ್ಯಕ್ರಮದ ಮೂಲಕ ಬಡಮಕ್ಕಳಿಗೆ ವಿದ್ಯಾರ್ಥಿ ವೇತನ, ಪುಸ್ತಕ, ನೋಟ್‌ಬುಕ್, ಪೆನ್ನು, ಬ್ಯಾಗು ಇತ್ಯಾದಿ ವಸ್ತುಗಳನ್ನು ವಿತರಿಸಲಾಗುತ್ತಿದೆ. ಸಂಸ್ಥೆಯ ಈ ಎಲ್ಲ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು 2004ರಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.