

ಬೆಂಗಳೂರು : ಗೌರಿ ಗಣೇಶ ಹಬ್ಬ ಹಿಂದುಗಳ ಭಾವನಾತ್ಮಕ ಹಬ್ಬವಾಗಿದ್ದು, ಇದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ಇದೆ. ಆದರೆ ರಾಜ್ಯ ಸರ್ಕಾರ ವಿವಿಧ ನಿಯಮಗಳ ಹೆಸರಿನಲ್ಲಿ ಗಣೇಶೋತ್ಸವಕ್ಕೆ ಇಲ್ಲಸಲ್ಲದ ವಿಘ್ನಗಳನ್ನು ತಂದೊಡ್ಡುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಆರೋಪಿಸಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಹಿಂಪ, ನಮ್ಮ ದೇಶದ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶಭಕ್ತರನ್ನು ಸಂಘಟಿಸಲು ಬಾಲಗಂಗಾಧರ್ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಗಣೇಶ ಹಬ್ಬವನ್ನಾಗಿ ಪರಿವರ್ತಿಸಿದರು. ಅಂದಿನಿಂದ ಇಂದಿನವರೆಗೂ ಸಹ ಗಣೇಶೋತ್ಸವು ಸಾರ್ವಜನಿಕ ಸ್ಥಳದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದೆ. ಆದರೆ ಈ ಬಾರಿ ನಮ್ಮ ರಾಜ್ಯದಲ್ಲಿ ವಿಘ್ನ ವಿನಾಶಕನ ಉತ್ಸವಕ್ಕೆ ರಾಜ್ಯ ಸರ್ಕಾರವು ನಿಯಮಗಳ ಕಾರಣ ನೀಡಿ ಅನೇಕ ರೀತಿಯ ವಿಘ್ನಗಳನ್ನು ತಂದು ಗಣೇಶನ ಭಕ್ತರ ಮೇಲೆ ಹೇರುತ್ತಿದೆ. ಗಣೇಶೋತ್ಸವದಲ್ಲಿ ಭಾಗವಹಿಸಲು ವಿಹಿಂಪ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರಿಗೆ ಚಿತ್ರದುರ್ಗ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಹಲವು ಕಡೆ ಧ್ವನಿ ವರ್ಧಕಗಳ ಬಳಕೆಗೆ ನಿಷೇಧ ಹೇರಿದೆ. ಈ ನಡುವೆ ಮಂಡ್ಯ ಜಿಲ್ಲೆಯ ಮದ್ದೂರು ಮತ್ತಿತರ ಸ್ಥಳಗಳಲ್ಲಿ ಗಣೇಶ ವಿಸರ್ಜನೆಯ ವೇಳೆಯಲ್ಲಿ ಹಮ್ಮಿಕೊಂಡಿದ್ದ ಶೋಭ ಯಾತ್ರೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಹಿಂದು ಕಾರ್ಯಕರ್ತರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಬಿ.ಇ.ಸುರೇಶ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಅನೇಕ ಮುಖಂಡರ ಮೇಲೆ ವಿಧಿಸಿರುವ ಜಿಲ್ಲಾ ಪ್ರವೇಶ ನಿರ್ಬಂಧ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಹಾಗೂ ಗಣೇಶ ಉತ್ಸವ ಹಾಗೂ ಶೋಭಾ ಯಾತ್ರೆ ಮೆರವಣಿಗೆಗಳು ಸಂಭ್ರಮದಿಂದ ನಡೆಯಲು ಅನುಕೂಲ ಮಾಡಿಕೊಡ ಬೇಕು. ಗಣೇಶೋತ್ಸವ ಶೋಭಾಯಾತ್ರೆಯ ಮೇಲೆ ಕಲ್ಲುತೂರಾಟ ಮಾಡುವವರ ಮೇಲೆ ಸಂಘಟಿತ ಅಪರಾಧ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಸರ್ಕಾರವನ್ನು ವಿಹಿಂಪ ಆಗ್ರಹಿಸಿದೆ.