

ಬಾಳೆಹೊನ್ನೂರು : ಕೆಲವು ಮಠಾಧೀಶರು ಇತ್ತೀಚೆಗೆ ವೀರಶೈವ ಲಿಂಗಾಯತ ಬೇರೆ ಎಂದು ಸಮಾಜದಲ್ಲಿ ಗೊಂದಲ ಉಂಟು ಮಾಡುತ್ತಿದ್ದು, ಈ ಬಗ್ಗೆ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದ ಸೆ.19 ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೆ ಜಗದ್ಗುರು ಪಂಚ ಪೀಠಾಧೀಶ್ವರರು ಬೆಂಬಲ ಘೋಷಿಸಿದ್ದಾರೆ.
ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ವೀರಶೈವ ಧರ್ಮ ಪ್ರಾಚೀನ ಇತಿಹಾಸ ಪರಂಪರೆ ಹೊಂದಿದ್ದು, ಸೈದ್ಧಾಂತಿಕ ನೆಲೆ ಮೂಲಗಳನ್ನು ಅರಿಯದ ಕೆಲವರು ವೀರಶೈವ ಲಿಂಗಾಯತ ಸಂಸ್ಕೃತಿಯನ್ನು ಕಲುಷಿತಗೊಳಿಸುತ್ತಿದ್ದಾರೆ. ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಮತ್ತು ಬಸವಾದಿ ಶರಣರ ವಿಚಾರಧಾರೆಗಳು ಒಂದೇ ಆಗಿದ್ದು, ವೀರಶೈವ ಧರ್ಮವಾಚಕ ಸೈದ್ಧಾಂತಿಕ ಸಮಗ್ರ ಪದವಾಗಿದ್ದರೆ, ಲಿಂಗಾಯತ ರೂಢಿಯಿಂದ ಸಹಜವಾಗಿ ಬಂದ ಪದವಾಗಿದೆ. ಇವೆರಡರಲ್ಲಿ ದ್ವಂದ್ವ ಉಂಟು ಮಾಡಬಾರದೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡಾ ಸ್ಪಷ್ಟಪಡಿಸಿದ್ದನ್ನು ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಶೃಂಗ ಸಮ್ಮೇಳನದಲ್ಲಿ ಜಗದ್ಗುರು ಪಂಚಪೀಠಾಧೀಶರು ಎತ್ತಿ ಹಿಡಿದಿದ್ದಾರೆ. ಆದರೆ ಬಸವ ಸಂಸ್ಕೃತಿ ಅಭಿಯಾನದ ಹಿನ್ನೆಲೆಯಲ್ಲಿ ಕೆಲವರು ವೀರಶೈವ ಲಿಂಗಾಯತ ಬೇರೆ ಎಂದು ಹೇಳುತ್ತಿರುವುದು ಬಸವಣ್ಣನವರ ಸಮಷ್ಟಿ ಪ್ರಜ್ಞೆಯ ವಿಚಾರಧಾರೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಜಾತಿ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಸಮಾಜ ಬಾಂಧವರ ಗೊಂದಲ ಪರಿಹರಿಸಲು ಸೆ.19ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಮಾವೇಶ ಯಶಸ್ವಿಯಾಗಿ ನೆರವೇರಲೆಂದು ಶ್ರೀರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಜಗದ್ಗುರುಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.