

ಬೆಂಗಳೂರು: ಯಾವುದೇ ಬರಹಗಾರರು ತಮ್ಮ ಬರಹದ ಮೊದಲ ವಿಮರ್ಶಕರು ತಾವೇ ಆಗಿದ್ದಾಗ ಆ ಬರಹ ಸುಂದರ ಮತ್ತು ಸಮೃದ್ಧವಾಗಿ ಮೂಡಿಬರಲು ಸಾಧ್ಯ ಎಂದು ಲೇಖಕಿ ರೂಪಾ ಗುರುರಾಜ ಹೇಳಿದರು.
ಪರಿಸರ ಸಂರಕ್ಷಣೆ ಗತಿವಿಧಿಯ ವತಿಯಿಂದ ಬನಶಂಕರಿಯ ಬಿ.ಎನ್.ಎಂ.ಐ.ಟಿ ಕಾಲೇಜಿನಲ್ಲಿ ನಡೆದ ಪರಿಸರಕ್ಕಾಗಿ ಅಕ್ಷರ ಸೇವೆ ಲೇಖಕರ ಸಮಾವೇಶದಲ್ಲಿ ಮಾತನಾಡಿದರು.
ಬರಹಗಾರರು ತಮ್ಮ ಬರಹಗಳಲ್ಲಿ ಜನರಿಗೆ ಏನನ್ನು ತಿಳಿಸಬೇಕು ಎಂಬ ಸ್ಪಷ್ಟತೆ ಹೊಂದಿರಬೇಕು. ಲೇಖಕರು ಪ್ರಬುದ್ಧತೆ ಹೊಂದಿದರೆ ಬರೆಯುವ ವಿಷಯದ ಕುರಿತು ಅಧ್ಯಯನ ಮಾಡಿದ್ದರೆ ತಮ್ಮ ಬರಹಕ್ಕೆ ನ್ಯಾಯ ಒದಗಿಸಲು ಸಹಕಾರಿಯಾಗುತ್ತದೆ. ನಮ್ಮ ವಿಚಾರಕ್ಕೆ ಗಟ್ಟಿತನವಿದ್ದರೆ ನಮ್ಮ ಬರಹಕ್ಕೆ ವೇದಿಕೆ ಸಿಕ್ಕೇ ಸಿಗುತ್ತದೆ. ಬರವಣಿಗೆಯಲ್ಲಿ ನಿರಂತರತೆ ಮುಖ್ಯ. ನಾವು ಬರೆಯುವ ಬರಹಕ್ಕೆ ಆಕರಗಳು ಅಗತ್ಯ. ಎಲ್ಲದಕ್ಕಿಂತಲೂ ನಾವು ಬರೆದಂತೆಯೇ ಬದುಕಿದಾಗ ಮಾತ್ರ ನಮ್ಮ ಬರಹಗಳ ತೂಕ ಹೆಚ್ಚಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ವಿನಾಯಕ ಮೂರೂರು ಮಾತನಾಡಿ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಭಾರತೀಯರಲ್ಲಿ ಮೊದಲಿನಿಂದಲೂ ಪ್ರಕೃತಿಯೊಂದಿಗೆ ಪೂರಕವಾದ ಸಂವೇದನೆ ಇದೆ. ಭೂಮಿಯನ್ನು ತಾಯಿಯ ರೂಪದಲ್ಲಿ ಕಂಡಿದ್ದೇವೆ. ಅದರ ಕುರಿತು ಲೇಖನಗಳನ್ನು ಬರೆಯಲು ಪರಿಸರತಜ್ಞರೇ ಆಗಬೇಕು ಎಂಬ ತಪ್ಪು ಕಲ್ಪನೆ ಇದೆ. ಆದರೆ ಬರೆವಣಿಗೆ ಯಾವ ವೇದಿಕೆಗೆ ಹೇಗಿರಬೇಕು ಎನ್ನುವುದನ್ನು ಅರ್ಥೈಸಿಕೊಂಡು ಬರೆಯಬೇಕು. ದಿನಪತ್ರಿಕೆಗಳಿಗೆ ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ಲೇಖನಗಳನ್ನು ಬರೆಯಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬರಹಗಳು ಸಾಧ್ಯವಾದಷ್ಟು ಚಿಕ್ಕದಿರಬೇಕು. ಹೀಗೆ ಆಯಾ ವೇದಿಕೆಗಳಿಗೆ ಸೂಕ್ತವಾದ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ಗತಿವಿಧಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ವೆಂಕಟೇಶ ಸಂಗನಾಳ, ಜನಸಂವಾದ ಪ್ರಾಂತ ಪ್ರಮುಖ ಸಹನಾ ಹೆಗಡೆ ಉಪಸ್ಥಿತರಿದ್ದರು.