

ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ದಿವಂಗತ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಲಾಗಿದೆ. ಇದರಿಂದ ಅಘಾತಕ್ಕೊಳಗಾಗಿರುವ ಅಭಿಮಾನಿಗಳು, ಸರ್ಕಾರ, ಪೊಲೀಸ್ ಮತ್ತು ಕನ್ನಡ ಚಲಚಿತ್ರ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಇಂದು (ಆ.17) ನಡೆದ ಸಭೆಯಲ್ಲಿ ಮಾತನಾಡಿದ್ದು, ಸ್ಮಾರಕ ನಿರ್ಮಿಸೋಕೆ ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.
ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರವಾಗಿ ಅನಿರುದ್ಧ್ ಅವರು ಇಂದು ಬೆಂಗಳೂರಿನ ಜಯನಗರದಲ್ಲಿರುವ ವಿಷ್ಣುವರ್ಧನ್ ನಿವಾಸದಲ್ಲಿ ಸಭೆ ಕರೆದಿದ್ದರು. ಈ ವೇಳೆ ವಿಷ್ಣು ಅಭಿಮಾನಿಗಳ ಜೊತೆ ಹಲವು ವಿಚಾರಗಳನ್ನು ಚರ್ಚಿಸಲಾಯ್ತು. ಮೊದಲು ಸಭೆಯಲ್ಲಿ ಎರಡು ವಿಡಿಯೋಗಳನ್ನು ತೋರಿಸಲಾಯ್ತು. ಎರಡೂ ವಿಡಿಯೋದಲ್ಲಿ ಅನಿರುದ್ಧ್ ಅವರು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದರು. ಒಂದು ಮೈಸೂರಲ್ಲಿ ಸ್ಮಾರಕ ಉದ್ಘಾಟನೆಗೂ ಮುಂಚೆ ಹಾಗೂ ಹಳೆ ಮನೆಯಲ್ಲಿ ಸಭೆ ಮಾಡಿದ್ದೇವೆ ಎಂದು ವಿಡಿಯೋದಲ್ಲಿ ತೋರಿಸಿದರು. ಇದೀಗ ತಮ್ಮ ಕುಟುಂಬದ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿದ ಅನಿರುದ್ಧ್, ನಾನು ಹಣ ಪಡೆದು ಸ್ಮಾರಕ ಒಡೆಸಿದ್ದೀನಿ ಎಂದು ಹೇಳಿದ್ದಾರೆ. ಸಮಾಧಿ ತೆರವು ವಿಚಾರ ನಮಗೆ ಗೊತ್ತಿತ್ತು, ಆ ವಿಚಾರದಲ್ಲಿ ದುಡ್ಡು ಬಂದಿದೆ ಅಂತೆಲ್ಲ ಕೆಲವರು ಹೇಳುತ್ತಿದ್ದಾರೆ. ಸ್ಮಾರಕ ಒಡೆದಿದ್ದಕ್ಕೆ ಕುಟುಂಬದವರಿಗೆ ಸಂತೋಷ ಆಗಿದೆ ಎಂದಿದ್ದಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ. ಯಾರಾದರೂ ಹಣ ಪಡೆದುಕೊಂಡು ತಂದೆಯ ಸ್ಮಾರಕ ಒಡೆಸುತ್ತಾರಾ. ಈ ರೀತಿಯ ಆರೋಪ ಮಾಡುವವರಿಗೆ ಎಂಥಹಾ ವಿಕೃತವಾದ ಮನಸ್ಸು ಇರಬೇಕು ಎಂದು ಅನಿರುದ್ಧ್ ಭಾವುಕರಾಗಿ ಮಾತನಾಡಿದರು.
(ಏಜೆನ್ಸೀಸ್)
ಅಭಿಮಾನ್ ಸ್ಟುಡಿಯೋದಲ್ಲಿನ ಘಟನೆ ಖಂಡನೀಯ, ದೇವಸ್ಥಾನಕ್ಕೆ ಕಳಶ ಏರಿಸಬೇಕಾದ್ರೆ ಅದರ ಅಡಿಪಾಯ ಮೊದಲು ಕಟ್ಟಬೇಕಾಗುತ್ತೆ. ಇತಿಹಾಸ ಗೊತ್ತಿಲ್ಲದೆ ಕೆಲವರು ನಮ್ಮ ಮೇಲೆ, ನಮ್ಮ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದಾರೆ. ಗೊಂದಲ ಹುಟ್ಟುಹಾಕುತ್ತಿದ್ದಾರೆ. ಇದು ನಾನು ಮೊದಲ ಬಾರಿಗೆ ಕರೆದಿರುವ ಸಭೆ ಅಲ್ಲ, ಹಲವು ಬಾರಿ ಅಭಿಮಾನಿಗಳ ಸಭೆ ಕರೆದು ಈ ಬಗ್ಗೆ ಮಾತನಾಡಿದ್ದೇನೆ. ಜಾಗದ ಸಮಸ್ಯೆ ಬಗ್ಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ಧೇನೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ.
ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಎಂಬುದು ನಮಗೆ ಗೊತ್ತಿರಲಿಲ್ಲ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಸಂಸ್ಕಾರ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ ಎಂದು ಆ ಸಮಯದಲ್ಲಿ ಕುಮಾರಸ್ವಾಮಿ ನಮಗೆ ಹೇಳಿದ್ದರು. ಹಾಗಾಗಿ ನಾವು ಅದಕ್ಕೆ ಒಪ್ಪಿಕೊಂಡೆವು ಎಂದಿದ್ದಾರೆ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಅಭಿಮಾನಿಗಳು ಯಾರೂ ಕೂಡ ದೂರ ಆಗಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕಿಸಿ, ಅಭಿಮಾನಿಗಳ ಆಸೆಯಂತೆ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ನಾನೂ ಸಹ ಸರ್ಕಾರದ ಬಳಿ ಮಾತನಾಡಲು ನಾವು ಸಿದ್ಧ ಎಂದು ಅನಿರುದ್ಧ್ ತಿಳಿಸಿದ್ದಾರೆ.