

ಬೆಂಗಳೂರು: 'ಸಾಹಸಸಿಂಹ', 'ಅಭಿನವ ಭಾರ್ಗವ', ಡಾ. ವಿಷ್ಣುವರ್ಧನ್ ಅವರು ಅಭಿನಯದ ಬ್ಲಾಕ್ಬಸ್ಟರ್, ಸೂಪರ್ಹಿಟ್ 'ಯಜಮಾನ' (Yajamana) ಸಿನಿಮಾ ಇದೀಗ ಮತ್ತೊಮ್ಮೆ ಚಿತ್ರಮಂದಿರಗಳತ್ತ ಮುಖಮಾಡಿದೆ.
ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಯಜಮಾನ ಚಿತ್ರವನ್ನು ಮತ್ತೊಮ್ಮೆ ಸಿನಿಪ್ರಿಯರೊಂದಿಗೆ ಸಂಭ್ರಮಿಸುವ ಸಲುವಾಗಿ ಚಿತ್ರತಂಡ ರೀ-ರಿಲೀಸ್ ಮಾಡಲು ನಿರ್ಧರಿಸಿದೆ. ಈ ಮೂಲಕ ವಿಷ್ಣುದಾದಾ ಅಭಿಮಾನಿಗಳ ಬಳಗಕ್ಕೆ ಸಿಹಿ ಸುದ್ದಿಯನ್ನು ನೀಡಿದೆ.
ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ಪ್ರೇಮಾ, ಪವಿತ್ರ ಲೋಕೇಶ್, ರಮೇಶ್ ಭಟ್, ಅವಿನಾಶ್, ಟೆನಿಸ್ ಕೃಷ್ಣ, ಎಂ.ಎನ್. ಲಕ್ಷ್ಮಿ ದೇವಿ, ಶೋಭರಾಜ್ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ ಈ ಚಿತ್ರವು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯ ಗಳಿಕೆಯನ್ನೇ ಕಂಡಿತು. ಕೇವಲ ಗಳಿಕೆ ಮಾತ್ರವಲ್ಲದೇ ಕನ್ನಡಿಗರ ಮನೆ-ಮನ ತಲುಪುವಲ್ಲಿ ಯಶಸ್ವಿಯಾಯಿತು. ಅಂದು ಸೂಪರ್ಹಿಟ್ ಕಂಡ ಯಜಮಾನ ಚಿತ್ರವನ್ನು ಇದೇ ನವೆಂಬರ್ 07ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಅಂದಿನ ಮಟ್ಟಿಗೆ 'ಯಜಮಾನ' ಚಿತ್ರವು ಬಾಕ್ಸ್ ಆಫೀಸ್ನಲ್ಲಿ 42 ಕೋಟಿ ರೂ. ಕಲೆಕ್ಷನ್ ಕಂಡಿತ್ತು ಎಂದು ಸಿನಿ ಮೂಲಗಳು ತಿಳಿಸಿವೆ. ಸಿನಿಮಾದ ಎಲ್ಲ ಹಾಡುಗಳು ಮತ್ತು ಸಂಭಾಷಣೆಗಳು ಸೂಪರ್-ಡೂಪರ್ ಹಿಟ್ ಆಗಿತ್ತು. ಇಂದಿಗೂ ಚಿತ್ರದ ಹಾಡುಗಳು, ಸನ್ನಿವೇಶಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿದಿವೆ. 'ಯಜಮಾನ'ರಿಗೆ ಕಥೆ ಬರೆದಿದ್ದ ರಾಧಾ ಭಾರತಿ ಮತ್ತು ಆರ್. ಶೇಷಾದ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದರು.