ಚೊಚ್ಚಲ ವಿಶ್ವಕಪ್ ಟ್ರೋಫಿ: ವೀರ ವನಿತೆಯರಿಗೆ ಡಬಲ್​ ಧಮಾಕಾ! ಐಸಿಸಿ, ಬಿಸಿಸಿಐನಿಂದ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ? | Team India

=
Published on

ನವದೆಹಲಿ: ನಿನ್ನೆ (ನ.02) ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ 52 ರನ್​ಗಳಿಂದ ಗೆದ್ದ ಹರ್ಮನ್​ಪ್ರೀತ್ ಕೌರ್​ ಪಡೆ, ಚೊಚ್ಚಲ ವಿಶ್ವಕಪ್​ ಟ್ರೋಫಿಗೆ ಮುತ್ತಿಡುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.

'ನಾರಿಶಕ್ತಿ' ಪ್ರದರ್ಶನ

ಐಸಿಸಿ ಮಹಿಳಾ ವಿಶ್ವಕಪ್ 2025 ಬಹುಮಾನ ಮೊತ್ತ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ 2025 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಇದರೊಂದಿಗೆ, ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡವು ಭಾರಿ ಬಹುಮಾನದ ಹಣವನ್ನು ಪಡೆದುಕೊಂಡಿತು. ಇದು 2023 ರ ಪುರುಷರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಗಳಿಸಿದ ಮೊತ್ತಕ್ಕಿಂತ ಹೆಚ್ಚಾಗಿದೆ.

ಪಂದ್ಯದ ವಿವರ

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರು, ಹರ್ಮನ್​ಪ್ರೀತ್ ಕೌರ್​ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 50 ಓವರ್​ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ ಭಾರತ 298 ರನ್​ ಕಲೆಹಾಕಿತು. ತಂಡದ ಪರ ಬ್ಯಾಟರ್​ಗಳಾದ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಈ ಬೃಹತ್ ರನ್​ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಬ್ಯಾಟ್ಸ್​ವುಮನ್​ ಲೌರಾ ವೋಲ್ವಾರ್ಡಟ್ (101 ರನ್​)​ ಅವರ ಶತಕದಾಟ ಬಿಟ್ಟರೆ ಇನ್ಯಾರ ಪ್ರದರ್ಶನವೂ ಸಾಥ್ ನೀಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು.

ಇನ್ನು ಚೊಚ್ಚಲ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟ ಭಾರತ ಮಹಿಳಾ ತಂಡಕ್ಕೆ ಬಹುಮಾನದ ವಿಷಯದಲ್ಲಿ ಡಬಲ್ ಧಮಾಕಾ ಒಲಿದಿದೆ. ಈ ಮೆಗಾ ಟೂರ್ನಮೆಂಟ್‌ನ ಒಟ್ಟು ಬಹುಮಾನದ ಮೊತ್ತ 13.88 ಮಿಲಿಯನ್ ಡಾಲರ್​ (ಅಂದರೆ 122.49 ಕೋಟಿ ರೂ.). ಇದು ನ್ಯೂಜಿಲೆಂಡ್‌ನಲ್ಲಿ ನಡೆದ 2022ರ ಆವೃತ್ತಿಗಿಂತ ಶೇ.297ರಷ್ಟು ಹೆಚ್ಚು. ಈ ಹೆಚ್ಚಳ ಪ್ರಮಾಣವನ್ನು ಐಸಿಸಿ ಅಧ್ಯಕ್ಷ ಜಯ್ ಶಾ ಜಾರಿಗೆ ತಂದಿದ್ದು, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇದನ್ನು ಸ್ಪಷ್ಟಪಡಿಸಿದ್ದಾರೆ.

ಗ್ರೂಪ್​ ಸ್ಟೇಜ್ ಗೆಲುವು

ಗ್ರೂಪ್​ ಸ್ಟೇಜ್​ನಲ್ಲಿ ಪ್ರತಿ ಪಂದ್ಯ ಗೆಲ್ಲುವ ಆಯಾ ತಂಡಕ್ಕೆ ಒಟ್ಟು 34,314 ಡಾಲರ್​ (ಸುಮಾರು 30.28 ಲಕ್ಷ ರೂ.) ನೀಡಲಾಯಿತು. ಅದೇ ಸಮಯದಲ್ಲಿ, ಭಾಗವಹಿಸುವ ಎಲ್ಲಾ ತಂಡಗಳು 250,000 ಡಾಲರ್ (2.21 ಕೋಟಿ ರೂ.) ಪಡೆಯುತ್ತವೆ. ಈ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು, ವಿಜೇತ ಭಾರತ ತಂಡ ಮತ್ತು ರನ್ನರ್ ಅಪ್ ಆದ ದಕ್ಷಿಣ ಆಫ್ರಿಕಾಕ್ಕೆ ಎಷ್ಟು ಬಹುಮಾನ ಹಣ ಲಭಿಸಿತು? ಇದರೊಂದಿಗೆ ಬಿಸಿಸಿಐ 125 ಕೋಟಿ ರೂ. ನೀಡುವುದಾಗಿ ಹೇಳಿತ್ತು. ಅದರಂತೆಯೇ ಕೊಟ್ಟಿತೇ? ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿವೆ.

ವರದಿಗಳ ಪ್ರಕಾರ, ವಿಜೇತ ಭಾರತ ತಂಡವು ಐಸಿಸಿಯಿಂದ 39.54 ಕೋಟಿ ರೂ. ಹಣವನ್ನು ಬಹುಮಾನ ರೂಪದಲ್ಲಿ ಪಡೆದಿದ್ದು ಹಾಗೂ ಗ್ರೂಪ್ ಸ್ಟೇಜ್​ನಲ್ಲಿ​ ಮೂರು ಗೆಲುವುಗಳನ್ನು ಸಾಧಿಸಿದ್ದಕ್ಕಾಗಿ ಒಟ್ಟಾರೆಯಾಗಿ 40.92 ಕೋಟಿ ರೂ. ಸ್ವೀಕರಿಸಿದೆ. ಇನ್ನು ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡವು 19.76 ಕೋಟಿ ರೂ. ಪಡೆದಿದ್ದು, ಗ್ರೂಪ್ ಸ್ಟೇಜ್​ನಲ್ಲಿ ಐದು ಪಂದ್ಯಗಳನ್ನು ಗೆದ್ದಿದೆ. ಇದರೊಂದಿಗೆ, ಒಟ್ಟಾರೆಯಾಗಿ 21.63 ಕೋಟಿ ರೂ. ಸ್ವೀಕರಿಸಿದೆ. ಇದರೊಂದಿಗೆ ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದು, ಅವರು 9.88 ಕೋಟಿ ರೂ. ಹಣವನ್ನು ಬಹುಮಾನವಾಗಿ ಪಡೆದಿದ್ದಾರೆ.

125 ಕೋಟಿ ರೂ. ಅಲ್ಲ!

ವಿಜೇತರು ಮತ್ತು ರನ್ನರ್ ಅಪ್ ತಂಡಗಳು ಪಡೆದ ಬಹುಮಾನದ ಹಣವು 2023ರ ಪುರುಷರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಪಡೆದ ಬಹುಮಾನವನ್ನು ಮೀರಿಸಿದೆ. ಆಸ್ಟ್ರೇಲಿಯಾದ ಕ್ಯಾಪ್ಟನ್​ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು 35.1 ಕೋಟಿ ರೂ.ಗಳನ್ನು ಬಹುಮಾನವಾಗಿ ಪಡೆಯಿತು. ಗ್ರೂಪ್​ ಸ್ಟೇಜ್​ನಲ್ಲಿ ಗೆದ್ದಿದ್ದಕ್ಕಾಗಿ 35.15 ಲಕ್ಷ ರೂ. ಸ್ವೀಕರಿಸಿತ್ತು. ಮಹಿಳೆಯರ ವಿಶ್ವಕಪ್​ ಟೂರ್ನಿಯಲ್ಲಿ ನಾರಿಶಕ್ತಿ ಪ್ರದರ್ಶಿಸಿದ ಭಾರತ ತಂಡಕ್ಕೆ ಬಿಸಿಸಿಐ ಕೂಡ ಭಾರಿ ಬಹುಮಾನವನ್ನೇ ಘೋಷಿಸಿದೆ. ಈ ಹಿಂದೆ 125 ಕೋಟಿ ರೂ. ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದು ನಿಜವಾಗಿಲ್ಲ. ಬದಲಿಗೆ ವಿಜೇತ ತಂಡಕ್ಕೆ 51 ಕೋಟಿ ರೂ. ಹಣವನ್ನು ಬಹುಮಾನವಾಗಿ ನೀಡಲಾಗಿದೆ.

ಈ ಕುರಿತು ದೇವಜಿತ್ ಸೈಕಿಯಾ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಹುಮಾನವನ್ನು ತಂಡದ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ವರ್ಗಕ್ಕೆ ತಲುಪುತ್ತದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net