ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಸ್ಫೋಟಕ ಆಟವಾಡಿ ನಿವೃತ್ತಿ ಹೊಂದಿದ ಬಳಿಕ ಟ್ವಿಟರ್ನಲ್ಲಿ ಚಟಾಕಿಗಳನ್ನು ಹಾರಿಸುವ ಮೂಲಕ ಗಮನಸೆಳೆಯುತ್ತ ಬಂದಿರುವ ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್, ಇದೀಗ “ಆದಿಪುರುಷ್’ ಸಿನಿಮಾದ ಬಗ್ಗೆ ತಮಾಷೆಯ ವಿಮರ್ಶೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ರಾಮಾಯಣದ ಕಥೆಯನ್ನು ಹೊಂದಿರುವ ಸಿನಿಮಾ ವಿಮರ್ಶಕರಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಸೂಪರ್ಸ್ಟಾರ್ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರಗಳ ವೇಷಭೂಷಣ, ಗ್ರಾಫಿಕ್ಸ್ ಮತ್ತು ಸಂಭಾಷಣೆಯ ಕಳಪೆ ಗುಣಮಟ್ಟದಿಂದ ಟೀಕೆಗಳನ್ನು ಎದುರಿಸಿದೆ. ಅಲ್ಲದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಸಿನಿಮಾ ಎಂಬ ಟೀಕೆಗೂ ಗುರಿಯಾಗಿದೆ. ಇಂಥ ನಕಾರಾತ್ಮಕ ವಿಮರ್ಶೆಗಳ ನಡುವೆ ಸೆಹ್ವಾಗ್ ಕೂಡ ಚಿತ್ರತಂಡದ ಕಾಲೆಳೆದಿದ್ದಾರೆ.
“ಆದಿಪುರುಷ್ ಸಿನಿಮಾ ನೋಡಿದ ಬಳಿಕ ನನಗೆ, ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬುದು ಗೊತ್ತಾಯಿತು’ ಎಂದು ಸೆಹ್ವಾಗ್ ಒಂದೇ ಸಾಲಿನಲ್ಲಿ ತಮಾಷೆಯಾಗಿ ಸಿನಿಮಾವನ್ನು ವಿಮರ್ಶಿಸಿದ್ದಾರೆ. ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ಬಾಹುಬಲಿ ಸಿನಿಮಾದ ಪಾತ್ರವನ್ನೂ ಎಳೆದುತರುವ ಮೂಲಕ ಸೆಹ್ವಾಗ್, ಸಿನಿಮಾವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.