More

  ಕಪಿಲ್​ ದೇವ್​ ಬಳಗದ 1983ರ ವಿಶ್ವವಿಕ್ರಮಕ್ಕೆ 40ರ ಸಂಭ್ರಮ

  ಬೆಂಗಳೂರು: ಯಾವುದೇ ನಿರೀೆಗಳಿಲ್ಲದೆ ಇಂಗ್ಲೆಂಡ್​ಗೆ ಪ್ರಯಾಣಿಸಿದ್ದ ಭಾರತದ ಯುವ ತಂಡ ಎರಡು ಬಾರಿಯ ವಿಶ್ವಕಪ್​ ಚಾಂಪಿಯನ್​ ವೆಸ್ಟ್​ ಇಂಡೀಸ್​ ತಂಡವನ್ನು ಮೊದಲ ಪಂದ್ಯದಲ್ಲೇ ಸೋಲಿಸಿತ್ತು. ಇದೊಂದು ಆಕಸ್ಮಿಕ ಎಂದುಕೊಳ್ಳುತ್ತಿರುವಷ್ಟರಲ್ಲೇ ಭಾರತ ತಂಡ ಒಂದೊಂದು ಅಚ್ಚರಿಯ ಫಲಿತಾಂಶದೊಂದಿಗೆ ಮುನ್ನಡೆದು ಫೈನಲ್​ಗೂ ದಾಪುಗಾಲಿಟ್ಟಿತ್ತು. ಲಾರ್ಡ್ಸ್​ ಮೈದಾನದಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಮತ್ತೊಮ್ಮೆ ಅದೇ ಬಲಿಷ್ಠ ವೆಸ್ಟ್​ ಇಂಡೀಸ್​ ತಂಡ ಎದುರಾಗಿತ್ತು. ಈ ಬಾರಿ ಭಾರತ ತಂಡದ ಕಥೆ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಸ್ಫೋಟಕ ಬ್ಯಾಟ್ಸ್​ಮನ್​ ವಿವ್​ ರಿಚರ್ಡ್ಸ್​, ಪ್ರಚಂಡ ವೇಗಿಗಳಾದ ಜೋಯೆಲ್​ ಗಾರ್ನರ್​, ಮಾಲ್ಕಂ ಮಾರ್ಷಲ್​, ಮೈಕೆಲ್​ ಹೋಲ್ಡಿಂಗ್​ ಮತ್ತು ಆಂಡಿ ರಾಬರ್ಟ್ಸ್​ ಒಳಗೊಂಡ ವಿಂಡೀಸ್​ ತಂಡದೆದುರು ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಅಸಾಧ್ಯವನ್ನು ಸಾಧ್ಯವಾಗಿಸುವ ಸಾಮರ್ಥ್ಯ ಕಪಿಲ್​ ದೇವ್​ ಸಾರಥ್ಯದ ತಂಡಕ್ಕಿತ್ತು.

  1983ರ ಜೂನ್​ 25ರಂದು ಲಾರ್ಡ್ಸ್​ ಮೈದಾನದಲ್ಲಿ ನಡೆದ ಫೈನಲ್​ನಲ್ಲಿ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದ್ದ ಕಪಿಲ್​ ದೇವ್​ ಬಳಗ, ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲಿ ಪ್ರುಡೆನ್ಶಿಯಲ್​ ವಿಶ್ವಕಪ್​ ಟ್ರೋಫಿ ಎತ್ತಿಹಿಡಿದಿತ್ತು. ಭಾರತೀಯ ಕ್ರಿಕೆಟ್​ನ ಚಿತ್ರಣವನ್ನೇ ಬದಲಾಯಿಸಿದ ಆ ಗೆಲುವಿಗೆ ಭಾನುವಾರ 40 ವರ್ಷ ಪೂರ್ಣಗೊಂಡಿದೆ.

  ಎಂಎಸ್​ ಧೋನಿ ಸಾರಥ್ಯದಲ್ಲಿ ಭಾರತ ತಂಡ 2011ರಲ್ಲಿ 2ನೇ ಬಾರಿ ಏಕದಿನ ವಿಶ್ವಕಪ್​ ಗೆಲುವು ದಾಖಲಿಸಿದಾಗ ತವರು ಮೈದಾನದಲ್ಲೇ ಕನಸು ನನಸಾದ ಸಾರ್ಥಕ ಕ್ಷಣ ಅದಾಗಿತ್ತು. ಆದರೆ ಅದಕ್ಕೆ 28 ವರ್ಷ ಮುನ್ನ ಭಾರತ ಚೊಚ್ಚಲ ವಿಶ್ವಕಪ್​ ಟ್ರೋಫಿ ಜಯಿಸಿದಾಗ ಅದು ಬರೀ ಗೆಲುವಾಗಿರಲಿಲ್ಲ. ಲಾರ್ಡ್ಸ್​ ಬಾಲ್ಕನಿಯಲ್ಲಿ ವಿಶ್ವಕಪ್​ ಟ್ರೋಫಿ ಸ್ವೀಕರಿಸುತ್ತ ನಾಯಕ ಕಪಿಲ್​ ದೇವ್​ ಬೀರಿದ್ದ ನಗು ಹೊಸ ಸಂಚಲನವನ್ನೇ ಮೂಡಿಸಿತ್ತು. ಯುವಕರೆಲ್ಲ ಕ್ರಿಕೆಟ್​ನತ್ತ ಆಕರ್ಷಿತರಾಗುವಂತೆ ಮಾಡಿ ಭಾರತದಲ್ಲಿ ಕ್ರಿಕೆಟ್​ ಹೊಸ ಧರ್ಮವಾಗಿ ಬೆಳಯುವಂತೆ ಮಾಡಿದ್ದು ಮಾತ್ರವಲ್ಲ, ಕ್ರಿಕೆಟ್​ಗೆ ಹಣದ ಪ್ರವಾಹ ಹರಿದು ಬರುವಂತೆ ಮತ್ತು ಕ್ರಿಕೆಟ್​ ಶ್ರೀಮಂತ ಆಟವಾಗಿ ಬೆಳೆದುನಿಲ್ಲುವ ವಿಶ್ವಾಸ ತುಂಬಿದ ಗೆಲುವು ಅದಾಗಿತ್ತು.

  ಫೈನಲ್​ ಪಂದ್ಯ ಹೀಗಿತ್ತು: 1983ರ ಜೂನ್​ 25ರಂದು ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದಿದ್ದ ಭಾರತ ತಂಡ 54.5 ಓವರ್​ಗಳಲ್ಲಿ 183 ರನ್​ಗಳಿಗೆ ಕುಸಿದಿತ್ತು. ಕೆ. ಶ್ರೀಕಾಂತ್​ (38) ಮತ್ತು ಮೊಹಿಂದರ್​ ಅಮರ್​ನಾಥ್​ (26) ಅಗ್ರ ಸರದಿಯಲ್ಲಿ ತಂಡಕ್ಕೆ ಆಸರೆಯಾಗಿದ್ದರೆ, ಮಧ್ಯಮ ಸರದಿಯಲ್ಲಿ ಸಂದೀಪ್​ ಪಾಟೀಲ್​ (27) ಮತ್ತು ಕಪಿಲ್​ ದೇವ್​ (15) ಮೊತ್ತ ಏರಿಸಿದ್ದರು. ಬಾಲಂಗೋಚಿಗಳಾದ ಕೊನೇ ಮೂವರು ಆಟಗಾರರು (ಮದನ್​ ಲಾಲ್​ 17, ಕಿರ್ಮಾನಿ 14, ಸಂಧು 11) ಒಟ್ಟು 42 ರನ್​ ಕೊಡುಗೆ ನೀಡಿದ್ದರು.
  ತಲಾ 60 ಓವರ್​ಗಳ ಪಂದ್ಯದಲ್ಲಿ ವಿಂಡೀಸ್​ಗೆ ಇದು ಸುಲಭ ಸವಾಲಾಗಿತ್ತು. ಆದರೆ ನಾಯಕ ಕಪಿಲ್​ ದೇವ್​ ರೂಪಿಸಿದ್ದ ಕಾರ್ಯತಂತ್ರಗಳ ಎದುರು ವಿಂಡೀಸ್​ ಮುಗ್ಗರಿಸಿತ್ತು. ಅಪಾಯಕಾರಿ ಆರಂಭಿಕ ಗಾರ್ಡನ್​ ಗ್ರೀನಿಜ್​ರನ್ನು (1) ಬಲ್ವಿಂದರ್​ ಸಿಂಗ್​ ಸಂಧು ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದ್ದರೂ, ವಿವ್​ ರಿಚರ್ಡ್ಸ್​ ಆಕ್ರಮಣಕಾರಿ ಆಟದ ಮೂಲಕ ಪಂದ್ಯವನ್ನು ಬೇಗನೆ ಮುಗಿಸುವ ದಾವಂತದಲ್ಲಿದ್ದರು. ಇದರಿಂದ ವಿಂಡೀಸ್​ ತಂಡ 1 ವಿಕೆಟ್​ಗೆ 50 ರನ್​ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಕ್ಯಾಚ್​ ಪಂದ್ಯ ಗೆಲ್ಲಿಸುತ್ತದೆ ಎಂಬ ಮಾತು ಆ ಕ್ಷಣ ನಿಜವಾಗಿತ್ತು. ಮದನ್​ ಲಾಲ್​ ಎಸೆತದಲ್ಲಿ ವಿವ್​ ರಿಚರ್ಡ್ಸ್​ ಗಾಳಿಯಲ್ಲಿ ಬಾರಿಸಿದ ಚೆಂಡನ್ನು ಕಪಿಲ್​ ದೇವ್​ ಹಿಮ್ಮುಖವಾಗಿ ಓಡಿ ಅದ್ಭುತವಾಗಿ ಕ್ಯಾಚ್​ ಹಿಡಿದಿದ್ದರು. ಅಲ್ಲಿಂದ ಮುಂದೆ ವಿಂಡೀಸ್​ ಅಧ@ಪತನ ಆರಂಭಗೊಂಡಿತ್ತು. 76 ರನ್​ಗೆ 6 ವಿಕೆಟ್​ ಕಳೆದುಕೊಂಡ ವಿಂಡೀಸ್​ ನಂತರ ಚೇತರಿಕೆ ಕಾಣಲಿಲ್ಲ. ಆಲ್ರೌಂಡ್​ ನಿರ್ವಹಣೆಯ ಮೂಲಕ ಗೆಲುವಿನ ರೂವಾರಿಯಾಗಿ ಮೂಡಿಬಂದ ಮೊಹಿಂದರ್​ ಅಮರ್​ನಾಥ್​ ಕೊನೇ ಆಟಗಾರ ಮೈಕೆಲ್​ ಹೋಲ್ಡಿಂಗ್​ರನ್ನು ಎಲ್​ಬಿಡಬ್ಲ್ಯು ಬಲೆಗೆ ಬೀಳಿಸುವುದರೊಂದಿಗೆ ವಿಂಡೀಸ್​ ತಂಡವನ್ನು 52 ಓವರ್​ಗಳಲ್ಲಿ 140 ರನ್​ಗೆ ಕಟ್ಟಿಹಾಕಿದ ಭಾರತ, 43 ರನ್​ಗಳಿಂದ ಗೆದ್ದು ವಿಶ್ವದ ಗಮನ ಸೆಳೆದಿತ್ತು.

  ಭಾರತ: 54.4 ಓವರ್​ಗಳಲ್ಲಿ 183 (ಗಾವಸ್ಕರ್​ 2, ಶ್ರೀಕಾಂತ್​ 38, ಅಮರ್​ನಾಥ್​ 26, ಯಶ್ಪಾಲ್​ 11, ಸಂದೀಪ್​ ಪಾಟೀಲ್​ 27, ಕಪಿಲ್​ 15, ಮದನ್​ ಲಾಲ್​ 17, ಕಿರ್ಮಾನಿ 14, ರಾಬರ್ಟ್ಸ್​ 32ಕ್ಕೆ 3, ಮಾರ್ಷಲ್​ 24ಕ್ಕೆ 2, ಹೋಲ್ಡಿಂಗ್​ 26ಕ್ಕೆ 2, ಗೋಮ್ಸ್​ 49ಕ್ಕೆ 2), ವೆಸ್ಟ್​ ಇಂಡೀಸ್​: 52 ಓವರ್​ಗಳಲ್ಲಿ 140 (ಗ್ರೀನಿಜ್​ 1, ಹೇಯ್ನ್​$್ಸ 13, ರಿಚರ್ಡ್ಸ್​ 33, ಲಾಯ್ಡ್​ 8, ಮಾರ್ಷಲ್​ 18, ಕಪಿಲ್​ 21ಕ್ಕೆ 1, ಸಂಧು 32ಕ್ಕೆ 2, ಮದನ್​ 31ಕ್ಕೆ 3, ರೋಜರ್​ 23ಕ್ಕೆ 1, ಅಮರ್​ನಾಥ್​ 12ಕ್ಕೆ 3). ಭಾರತಕ್ಕೆ 43 ರನ್​ ಜಯ. ಪಂದ್ಯಶ್ರೇಷ್ಠ: ಮೊಹಿಂದರ್​ ಅಮರ್​ನಾಥ್​.

  ಭಾರತದ ವಿಶ್ವಕಪ್​ ಗೆಲುವಿನ ಹಾದಿ…
  ಗುಂಪು ಹಂತ: ವಿಂಡೀಸ್​ ವಿರುದ್ಧ 34 ರನ್​ ಜಯ.
  ಗುಂಪು ಹಂತ: ಜಿಂಬಾಬ್ವೆ ವಿರುದ್ಧ 5 ವಿಕೆಟ್​ ಜಯ.
  ಗುಂಪು ಹಂತ: ಆಸೀಸ್​ ವಿರುದ್ಧ 162 ರನ್​ ಸೋಲು.
  ಗುಂಪು ಹಂತ: ವಿಂಡೀಸ್​ ವಿರುದ್ಧ 66 ರನ್​ ಸೋಲು.
  ಗುಂಪು ಹಂತ: ಜಿಂಬಾಬ್ವೆ ವಿರುದ್ಧ 31 ರನ್​ ಜಯ.
  ಗುಂಪು ಹಂತ: ಆಸೀಸ್​ ವಿರುದ್ಧ 118 ರನ್​ ಜಯ.
  ಸೆಮಿಫೈನಲ್​: ಇಂಗ್ಲೆಂಡ್​ ವಿರುದ್ಧ 6 ವಿಕೆಟ್​ ಜಯ.
  ಫೈನಲ್​: ವೆಸ್ಟ್​ ಇಂಡೀಸ್​ ವಿರುದ್ಧ 43 ರನ್​ ಗೆಲುವು.

  ಇಬ್ಬರು ಕನ್ನಡಿಗರ ಕೊಡುಗೆ
  83ರ ವಿಶ್ವಕಪ್​ ವಿಜೇತ ತಂಡದಲ್ಲಿ ಇಬ್ಬರು ಕನ್ನಡಿಗರೂ ಪ್ರಮುಖ ಕೊಡುಗೆ ನೀಡಿದ್ದರು. ವೇಗಿ ರೋಜರ್​ ಬಿನ್ನಿ ಟೂರ್ನಿಯಲ್ಲಿ ಗರಿಷ್ಠ 18 ವಿಕೆಟ್​ ಕಬಳಿಸಿದ್ದರು. ಸಯ್ಯದ್​ ಕಿರ್ಮಾನಿ ವಿಕೆಟ್​ ಕೀಪಿಂಗ್​ನಲ್ಲಿ ಕೆಲವು ಪ್ರಮುಖ ಕ್ಯಾಚ್​ ಹಿಡಿಯುವ ಜತೆಗೆ ಬ್ಯಾಟಿಂಗ್​ನಲ್ಲೂ ಉಪಯುಕ್ತ ಕೊಡುಗೆಗಳನ್ನು ನೀಡಿದ್ದರು.

  ಅಲ್ಪ ಬಹುಮಾನ ಮೊತ್ತ
  ಭಾರತ ಕ್ರಿಕೆಟ್​ ತಂಡದ ಆಟಗಾರರು ಈಗ ಕೋಟಿ ಲೆಕ್ಕಾಚಾರದಲ್ಲಿ ಸಂಭಾವನೆ ಗಳಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ 1983ರ ವಿಶ್ವಕಪ್​ ಗೆಲುವಿನ ನಂತರ ಆದ ಬದಲಾವಣೆ. ಆದರೆ 83ರ ವಿಶ್ವಕಪ್​ ವಿಜೇತ ತಂಡದ ಆಟಗಾರರ ಸಂಭಾವನೆ ಸಾವಿರದ ಲೆಕ್ಕಾಚಾರದಲ್ಲೇ ಇತ್ತು. ಕಪಿಲ್​ ದೇವ್​ ಬಳಗದ ಆಟಗಾರರಿಗೆ ಪ್ರತಿ ಪಂದ್ಯದ ಸಂಭಾವನೆ 1,500 ರೂ. ಆಗಿತ್ತು. ಜತೆಗೆ 200 ರೂ. ದಿನಭತ್ಯೆ. ವಿಶ್ವಕಪ್​ ಪ್ರಾಯೋಜಕ ಪ್ರುಡೆನ್ಶಿಯಲ್​ ಕಂಪನಿಯಿಂದ ಆಗ 20 ಸಾವಿರ ಪೌಂಡ್ಸ್​ ಬಹುಮಾನ ಲಭಿಸಿತ್ತು. ಲತಾ ಮಂಗೇಶ್ಕರ್​ ಸಾರಥ್ಯದಲ್ಲಿ ಆಗ ಸಂಗೀತಗೋಷ್ಠಿಯೊಂದನ್ನು ನಡೆಸುವ ಮೂಲಕ ಹಣ ಸಂಗ್ರಹ ಮಾಡಿದ್ದ ಬಿಸಿಸಿಐ, ಎಲ್ಲ ಆಟಗಾರರಿಗೆ ತಲಾ 1 ಲಕ್ಷ ರೂ. ಬಹುಮಾನ ವಿತರಿಸಿತ್ತು. ಕಪಿಲ್​ ದೇವ್​ ಸಹಿತ ಕೆಲ ಆಟಗಾರರಿಗೆ ಆಗ ವಿವಿಧ ಜಾಹೀರಾತು ಆಫರ್​ಗಳಿಂದ 30ರಿಂದ 50 ಸಾವಿರ ರೂ. ಮೊತ್ತದ ಒಪ್ಪಂದಗಳು ಲಭಿಸಿದ್ದವು.

  ಬಾಲಿವುಡ್​ ಸಿನಿಮಾವೂ ಬಂದಿದೆ
  ಕಪಿಲ್​ ದೇವ್​ ಬಳಗದ 1983ರ ವಿಶ್ವಕಪ್​ ಯಶೋಗಾಥೆ ಈಗಾಗಲೆ ಬೆಳ್ಳಿತೆರೆಗೂ ಬಂದಿದೆ. “83′ ಹೆಸರಿನ ಬಾಲಿವುಡ್​ ಸಿನಿಮಾ 2021ರ ಡಿಸೆಂಬರ್​ 24ರಂದು ತೆರೆ ಕಂಡು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾದರೂ ಬಾಕ್ಸ್​ ಆಫೀಸ್​ನಲ್ಲಿ ಸಾಧಾರಣ ಯಶ ಕಂಡಿತ್ತು. ಕಬೀರ್​ ಖಾನ್​ ನಿರ್ದೇಶನದ ಸಿನಿಮಾದಲ್ಲಿ ರಣವೀರ್​ ಸಿಂಗ್​ ನಾಯಕ ಕಪಿಲ್​ ದೇವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಪಿಲ್​ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು.

  ಏಕದಿನ ವಿಶ್ವಕಪ್​ ವೇಳಾಪಟ್ಟಿ ಪ್ರಕಟಿಸಲು ಕೊನೆಗೂ ಮುಹೂರ್ತ ಫಿಕ್ಸ್​ ಮಾಡಿದ ಬಿಸಿಸಿಐ ಮತ್ತು ಐಸಿಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts