

ಬೆಂಗಳೂರು: ಟೀಮ್ ಇಂಡಿಯಾದ ದಿಗ್ಗಜ ಆಟಗಾರ, ದಾಖಲೆಗಳ ಸರದಾರ, 'ರನ್ ಮೆಷಿನ್', ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ (Virat Kohli) ಕಳೆದ 18 ವರ್ಷಗಳಿಂದ ಪ್ರತಿನಿಧಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ ಎಂಬ ಬಲವಾದ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತಮ್ಮ ನೆಚ್ಚಿನ ಸ್ಟಾರ್ ಕ್ರಿಕೆಟಿಗ ಗುಡ್ಬೈ ವಿಚಾರ ಫ್ಯಾನ್ಸ್ಗಳಲ್ಲಿ ಆತಂಕ ಸೃಷ್ಟಿಸಿದ್ದು, ಇದು ನಿಜವೇ? ಎಂಬ ಪ್ರಶ್ನೆಗಳು ತೀರ ಚರ್ಚೆಯಲ್ಲಿವೆ.
ಆರ್ಸಿಬಿಗೆ ಸಂಬಂಧಿಸಿದ ಹೊಸ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಲು ಕೊಹ್ಲಿ ನಿರಾಕರಿಸಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಇಂಥದ್ದೊಂದು ಚರ್ಚೆ ಎಲ್ಲೆಡೆ ಜೋರಾಗಿದೆ. ಆದಾಗ್ಯೂ, ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಆಪ್ತ ಮೂಲಗಳು ಸೂಚಿಸಿವೆ. ಕಳೆದ 18ನೇ ಆವೃತ್ತಿಯಲ್ಲಿ ಆರ್ಸಿಬಿಗೆ ಟ್ರೋಫಿ ಗೆದ್ದುಕೊಟ್ಟ ಮರುದಿನವೇ ಸಂಭವಿಸಿದ ಕಾಲ್ತುಳಿತ ದುರಂತ ಕೊಹ್ಲಿ ಸೇರಿದಂತೆ ಇಡೀ ಫ್ರಾಂಚೈಸಿಯ ಆಟಗಾರರಿಗೆ ಅತೀವ ದುಃಖವನ್ನು ತಂದೊಡ್ಡಿತು. ಈ ಕಹಿ ಘಟನೆಯಿಂದ ಪ್ರಾಯಶಃ ವಿರಾಟ್ ಆರ್‌ಸಿಬಿ ಪರ ಆಡಲು ನಿರ್ಧರಿಸಿರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಈ ಕುರಿತಂತೆ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಮಾತನಾಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕೊಹ್ಲಿ ಆರ್‌ಸಿಬಿ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀಕಾಂತ್, "ಅದೊಂದು ವದಂತಿ ಅಷ್ಟೇ. ಆರ್ಸಿಬಿಗೆ ಕೊಹ್ಲಿ ಕಪ್ ಗೆದ್ದುಕೊಟ್ಟಿದ್ದಾರೆ. ಹೀಗಾಗಿ, ಅವರು ಐಪಿಎಲ್ನಿಂದ ನಿವೃತ್ತಿ ಪಡೆಯುವುದಿಲ್ಲ. ಇವೆಲ್ಲ ಸುಳ್ಳು ಸುದ್ದಿಗಳು. ನನಗೆ ಗೊತ್ತಿರುವ ಪ್ರಕಾರ, ಆರ್‌ಸಿಬಿ ಮಾಲೀಕತ್ವ ಬದಲಾಗಬಹುದೇ ವಿನಃ ವಿರಾಟ್ ಗುಡ್ಬೈ ಹೇಳುವ ಯಾವ ಮುನ್ಸೂಚನೆಗಳು ಇಲ್ಲ. ಆತ ಫ್ರಾಂಚೈಸಿಯೊಂದಿಗೆ ಮುಂದುವರಿಯುತ್ತಾರೆ" ಎಂದು ಹೇಳಿದ್ದಾರೆ.
"ಅಷ್ಟಕ್ಕೂ ವಿರಾಟ್ ಏಕೆ ಗುಡ್ಬೈ ಹೇಳಬೇಕು? ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಹಾಗೂ ಇನ್ನಿಂಗ್ಸ್ ನೀಡಿದ್ದಾರೆ. ಈ ಬಗ್ಗೆ ಖುದ್ದಾಗಿ ಅವರೇ ನಿರ್ಧಾರ ಕೈಗೊಂಡರೆ, ನಾವು ಒಪ್ಪಿಕೊಳ್ಳಬಹುದು. ಇನ್ನೂ ಮೂರು ವರ್ಷಗಳ ಕಾಲ ಕೊಹ್ಲಿ ಐಪಿಎಲ್ ಆಡಬಹುದು. ಅವರಿಂದ ರನ್ಗಳ ಸುರಿಮಳೆ ಹರಿಯುತ್ತಲೇ ಇರುತ್ತದೆ ಮತ್ತು ಕಿಂಗ್ ಆಫ್ ಕಿಂಗ್ಸ್ ಆಗಿರುತ್ತಾರೆ" ಎಂದು ಶ್ರೀಕಾಂತ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ.
ಆರ್‌ಸಿಬಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಐಪಿಎಲ್ ಕಪ್ ಗೆದ್ದ ಬೆನ್ನಲ್ಲೇ ಬೆಂಗಳೂರಿಗೆ ಆಗಮಿಸಿತು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಯುವ ಅಭಿಮಾನಿಗಳು ದುರಂತ ಅಂತ್ಯ ಕಂಡರು. ಇನ್ನೂ ಅನೇಕರು ಗಂಭೀರವಾಗಿ ಗಾಯಗೊಂಡರು. ಈ ಘಟನೆ ಬಳಿಕ ಫ್ರಾಂಚೈಸಿಗೆ ಹಲವಾರು ಸಮಸ್ಯೆಗಳು ಎದುರಾಯಿತು. ಸಾಲು ಸಾಲು ಆರೋಪಗಳ ಜತೆಗೆ ಕೇಸ್ ಕೂಡ ದಾಖಲಾಯಿತು. ಸಂಭ್ರಮದ ಹಾದಿಯಿಂದ ಸೂತಕದ ಛಾಯೆ ಮೂಡಿದ್ದು, ಫ್ರಾಂಚೈಸಿಯ ಕಳೆಯನ್ನೇ ಸದ್ಯ ಕಸಿದಂತಾಗಿದೆ. ಈ ಮಧ್ಯೆ, ಇತ್ತೀಚಿನ ವರದಿಯೊಂದು, ಆರ್‌ಸಿಬಿ ಅನ್ನು ಮಾರಾಟ ಮಾಡಲು ಆಡಳಿತ ಮಂಡಳಿಯು ನಿರ್ಧರಿಸಿರುವುದಾಗಿ ತಿಳಿಸಿದೆ.
‘ಟೈಮ್ಸ್ ಆಫ್ ಇಂಡಿಯಾ’ ವರದಿ ಪ್ರಕಾರ, ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. “ಆರ್‌ಸಿಬಿ ಫ್ರಾಂಚೈಸಿಯು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದುಹಾಕಲು ಅಂತಿಮ ನಿರ್ಧಾರವನ್ನು ಈಗಾಗಲೇ ಕೈಗೊಂಡಿದೆ. ಈ ಸಂಬಂಧ ದಾಖಲೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಖರೀದಿದಾರರು ಮುಂದೆ ಬಂದರೆ ಶೀಘ್ರವೇ ಫ್ರಾಂಚೈಸಿಯನ್ನು ಮಾಲೀಕರು ಮಾರಾಟ ಮಾಡಲು ಸಿದ್ಧರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ,(ಏಜೆನ್ಸೀಸ್).