ಕೊಹ್ಲಿ ಟೆಸ್ಟ್​ ನಿವೃತ್ತಿಗೆ ಒತ್ತಾಯಿಸಿದ್ದು ಯಾರು? ಭಾರತದ ಮಾಜಿ ಬೌಲಿಂಗ್ ಕೋಚ್ ಬಿಚ್ಚಿಟ್ಟ ರಹಸ್ಯವಿದು... Virat Kohli

Virat Kohli
Published on

Virat Kohli : ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವುದನ್ನು ಅಭಿಮಾನಿಗಳಿನ್ನೂ ಅರಗಿಸಿಕೊಂಡಿಲ್ಲ. ಕನಿಷ್ಠ ಪಕ್ಷ ಇಂಗ್ಲೆಂಡ್ ವಿರುದ್ಧದ ಸರಣಿಯನ್ನಾದರೂ ಆಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಕೊಹ್ಲಿ ದಿಢೀರ್​ ನಿವೃತ್ತಿ ಘೋಷಣೆ ಮಾಡಿದ್ದೇಕೆ ಎಂಬ ಪ್ರಶ್ನೆಯೂ ಇದೆ. ಬಿಸಿಸಿಐ ಒಳಗೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನವೂ ಮೂಡಿದೆ. ಕೆಲವರು ಕೋಚ್​ ಗಂಭೀರ್​ ಅವರನ್ನು ಟೀಕಿಸಿದ್ದಾರೆ. ಇದೆಲ್ಲದರ ನಡುವೆ ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಕೊಹ್ಲಿ ನಿವೃತ್ತಿಯ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.

ಟೆಸ್ಟ್​ ಕ್ರಿಕೆಟ್‌ಗೆ ವಿದಾಯ ಹೇಳಿದ ಕೊಹ್ಲಿಯ ನಿರ್ಧಾರವನ್ನು ನಿಸ್ವಾರ್ಥ ಕಾರ್ಯ ಎಂದು ಪರಾಸ್​ ಮಾಂಬ್ರೆ ಬಣ್ಣಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ದೀರ್ಘ ಸ್ವರೂಪದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಹೀಗಾಗಿ ಅವರು ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಮಾಂಬ್ರೆ ಹೇಳಿದರು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಇನ್ನು ಮುಂದೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದಾರೆ. ಇದು ಅವರ ನಿವೃತ್ತಿ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು. ಅವರಿಬ್ಬರೂ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಕೆಲಸ ಮಾಡಿದ್ದಾರೆ ಮತ್ತು ತಂಡಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಟೆಸ್ಟ್ ಸ್ವರೂಪದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದಾಗ ಅದನ್ನು ತಪ್ಪಿಸುವುದು ಉತ್ತಮ ಎಂದು ಅವರು ಭಾವಿಸುತ್ತಾರೆ. ಇದೇ ಅವರು ಅನುಸರಿಸುವ ಮಾರ್ಗ. ಆದ್ದರಿಂದ ಈ ಇಬ್ಬರೂ ತಂಡಕ್ಕಾಗಿ ತೆಗೆದುಕೊಂಡ ನಿಸ್ವಾರ್ಥ ನಿರ್ಧಾರವಾಗಿದೆ ಎಂದು ಮಾಂಬ್ರೆ ಕೊಹ್ಲಿ ಮತ್ತು ರೋಹಿತ್​ರನ್ನು ಕೊಂಡಾಡಿದರು.

ಟೆಸ್ಟ್ ಮತ್ತು ಟಿ20 ಪಂದ್ಯಗಳಿಂದ ಇಬ್ಬರೂ ಹಿಂದೆ ಸರಿದಿರುವ ಬಗ್ಗೆ ಮಾತನಾಡಿದ ರೋಹಿತ್​ ಮತ್ತು ಕೊಹ್ಲಿ, ತಮ್ಮ ನಿರ್ಧಾರವು ಈಗ ಸಂಪೂರ್ಣವಾಗಿ ಏಕದಿನ ಪಂದ್ಯಗಳತ್ತ ಗಮನಹರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಆದರೆ, ಇಬ್ಬರು ದಿಢೀರ್​ ನಿವೃತ್ತಿ ಘೋಷಣೆ ಮಾಡಿರುವುದರ ಹಿಂದೆ ಬೇರೇನೋ ಕಾರಣ ಇದೆ ಎಂದು ಈಗಲೂ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಐಪಿಎಲ್ 2025 ಸೀಸನ್ ನಡೆಯುತ್ತಿರುವಾಗಲೇ ಮೇ 7ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಹಿಟ್‌ಮ್ಯಾನ್ ತನ್ನ ನಿರ್ಧಾರವನ್ನು ಘೋಷಿಸಿದ ಐದು ದಿನಗಳ ನಂತರ, ಕೊಹ್ಲಿ ದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದರು. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಮುನ್ನವೇ ಇಬ್ಬರು ದಿಗ್ಗಜರು ನಿವೃತ್ತಿ ಘೋಷಣೆ ಮಾಡಿದ್ದು, ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಗಿಲ್ ನೇತೃತ್ವದ ಭಾರತೀಯ ತಂಡವು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, 5 ಪಂದ್ಯಗಳ ಸರಣಿಯ ಭಾಗವಾಗಿ ಜೂನ್ 20 ರಂದು ಮೊದಲ ಟೆಸ್ಟ್ ಆರಂಭವಾಗಲಿದೆ. ಈ ಸರಣಿಯ ಮೂಲಕ ಟೀಮ್ ಇಂಡಿಯಾ ಡಬ್ಲ್ಯುಟಿಸಿಯ ನಾಲ್ಕನೇ ಚಕ್ರವನ್ನು ಆರಂಭಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net