

ಮೆಲ್ಬೋರ್ನ್: ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ (Team India) ಮತ್ತೊಮ್ಮೆ ಮುಗ್ಗರಿಸಿದ್ದು, ಫಾಲೋಆನ್ ಭೀತಿ ಎದುರಿಸುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ ದೃಷ್ಟಿಯಿಂದ ಭಾರತದ ಪಾಲಿಗೆ ಈ ಬೆಳವಣಿಗೆ ಮುಳುವಾಗುವ ಸಾಧ್ಯತೆ ಇದೆ.
ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ರೋಹಿತ್ ಶರ್ಮ ಹಾಗೂ ರಾಹುಲ್ರ ವಿಕೆಟ್ಅನ್ನು ಬೇಗನೆ ಕಳೆದುಕೊಂಡಿತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) 102 ರನ್ಗಳ ಜತೆಯಾಟವಾಡುವ ಮೂಲಕ ಆಸೀಸ್ ಪಡೆಗೆ ತಕ್ಕ ತಿರುಗೇಟು ನೀಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, 82 ರನ್ಗಳಿಸಿದ್ದ ವೇಳೆ ಇಲ್ಲದ ರನ್ ಕದಿಯಲು ಹೋಗಿ ಜೈಸ್ವಾಲ್ ಔಟಾಗಿದ್ದು, ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಆದರೆ, ಜೈಸ್ವಾಲ್ ರನ್ಔಟ್ ಆಗಲು ಕೊಹ್ಲಿ ಕಾರಣ ಎಂದು ಸ್ಟೀವ್ ಸ್ಮಿತ್ ಆರೋಪಿಸಿದ್ದಾರೆ.
ಎರಡನೇ ದಿನದ ಆಟದ ಕೊನೆಯಲ್ಲಿ ಯಶಸ್ವಿ ಜೈಸ್ವಾಲ್ ಔಟಾಗಿದ್ದು, ದೊಡ್ಡ ಬದಲಾವಣೆ ಎಂದರೆ ತಪ್ಪಾಗಲಾರದು. ಜೈಸ್ವಾಲ್ 82 ರನ್ ಗಳಿಸಿದಾಗ ರನ್ ಓಡಲು ಮುಂದಾಗಿದ್ದರು, ಈ ವೇಳೆ ವಿರಾಟ್ (Virat Kohli) ಅವರನ್ನು ವಾಪಸ್ ಹೋಗುವಂತೆ ಹೇಳಿದ್ದೆ ರನ್ಔಟ್ಗೆ ಕಾರಣವಾಯಿತು. ಇದು ಪಂದ್ಯದ ಸಂಪೂರ್ಣ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಇದು ಕೇವಲ ಅದೃಷ್ಟವಾಗಿತ್ತು. ಕೆಲವೊಮ್ಮೆ ನೀವು ಪಾರ್ಟ್ನರ್ಶಿಪ್ ಮುರಿದಾಗ ಬೇಗನೆ ವಿಕೆಟ್ಗಳನ್ನು ಪಡೆಯಬಹುದು ಎಂದು ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.