

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನೀರಸ ಪ್ರದರ್ಶನ ತೋರುತ್ತಿದ್ದು, ಮುಂಬರುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಕಷ್ಟ ಎಂದು ಹೇಳಲಾಗಿದೆ. ಇನ್ನೂ ಟೆಸ್ಟ್ ಸರಣಿಗಳ ವಿಚಾರಕ್ಕೆ ಬರುವುದಾದರೆ ನಾಯಕ ರೋಹಿತ್ ಶರ್ಮ (Rohit Sharma) ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳದೆ ಇರುವುದು ತಂಡದ ಮ್ಯಾನೇಜ್ಮೆಂಟ್ಅನ್ನು ಚಿಂತೆಗೆ ದೂಡಿದ್ದು, ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ರೋಹಿತ್ ಶರ್ಮ (Rohit Sharma) ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲೂ ಕೂಡ ತೀವ್ರ ಮುಖಭಂಗವನ್ನು ಅನುಭವಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿಯುವ ಸಲುವಾಗಿ ತಂಡದಲ್ಲಿ ಬದಲಾವಣೆ ಮಾಡಿದ್ದರು. ಆದರೆ, ನಾಲ್ಕನೇ ಟೆಸ್ಟ್ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ ರೋಹಿತ್ಗೆ ನಿವೃತ್ತಿ ಘೋಷಿಸುವಂತೆ ಆಗ್ರಹ ಕೇಳಿ ಬರುತ್ತಿದ್ದು, ಇವರ ಕ್ಯಾಪ್ಟನ್ಸಿ ವಿರುದ್ಧವೂ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ಧಾರೆ.
ರೋಹಿತ್ ಫಾರ್ಮ್ ಕುರಿತಂತೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮಾರ್ಕ್ ವಾಗ್, ರೋಹಿತ್ ಶರ್ಮಾ (Rohit Sharma) ಕೊನೆಯ ಮೂರು ಇನ್ನಿಂಗ್ಸ್ಗಳಲ್ಲಿ ಏನನ್ನಾದರೂ ಮಾಡದಿದ್ದರೆ, ಅವರ ವೃತ್ತಿಜೀವನವು ಖಂಡಿತವಾಗಿಯೂ ಅಂತ್ಯಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ರೋಹಿತ್ ತಪ್ಪಾದ ಶಾಟ್ ಸೆಲೆಕ್ಷನ್ನಿಂದ ಔಟಾದರು. ಭಾರತೀಯ ನಾಯಕನಿಗೆ ಇದು ದುಃಖದ ಸ್ಥಿತಿಯಾಗಿದ್ದು, ಮುಂಬರುವ ಮೂರು ಇನ್ನಿಂಗ್ಸ್ನಲ್ಲಿ ಅವರು ನಿರೂಪಿಸಬೇಕಿದೆ ಎಂದು ಹೇಳಿದ್ಧಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮ (Rohit Sharma) ಪ್ರದರ್ಶನವನ್ನು ನೋಡುವುದಾದರೆ ಕಳೆದ 14 ಇನ್ನಿಂಗ್ಸ್ಗಳಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ತುಂಬಾ ಕಳಪೆಯಾಗಿದೆ. ಕಳೆದ 14 ಇನ್ನಿಂಗ್ಸ್ಗಳಲ್ಲಿ ಅವರು ಕೇವಲ 155 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ, ಅವರ ಸರಾಸರಿ ಕೇವಲ 11.07 ಆಗಿದ್ದು, ಒಮ್ಮೆ ಮಾತ್ರ 50 ರನ್ ಗಡಿ ದಾಟಿದ್ದಾರೆ. ಹೀಗಿರುವಾಗ ನಾಯಕನ ಜೊತೆಗೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಈಗ ಹಲವು ಪ್ರಶ್ನೆಗಳು ಎದ್ದಿವೆ.
ಇದಲ್ಲದೆ ರೋಹಿತ್ (Rohit Sharma) ನಾಯಕತ್ವದ ಬಗ್ಗೆಯೂ ಅಪಸ್ವರ ಕೇಳಿ ಬಂದಿದ್ದು, ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಹಿಟ್ಮ್ಯಾನ್ ಮಾಡಿದ ಎಡವಟ್ಟು ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಸ್ಪಿನ್ನರ್ಗಳಿಗೆ ವಿಕೆಟ್ ಸಹಕಾರಿಯಾಗುತ್ತಿದ್ದರೂ ರೋಹಿತ್ ವೇಗದ ಬೌಲಿಂಗ್ಗೆ ರೋಹಿತ್ ಹೆಚ್ಚು ಒತ್ತು ನೀಡಿರುವುದು ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ವಾಷಿಂಗ್ಟನ್ ಸುಂದರ್ರನ್ನು ತಂಡದಲ್ಲಿ ಸೇರಿಸಿಕೊಂಡಿದರಾದರು ಹೆಚ್ಚು ಬಳಸಿಕೊಳ್ಳದೇ ಇರುವುದು ರೋಹಿತ್ ಕ್ಯಾಪ್ಟನ್ಸಿ ವಿರುದ್ಧವೂ ಅಪಸ್ವರ ಎತ್ತಲು ಕಾರಣವಾಗಿದೆ.
ಈ ವಿಚಾರವಾಗಿ ರೋಹಿತ್ಗೆ ಮಾಜಿ ಕ್ರಿಕೆಟಿಗರು, ಕ್ರೀಡಾಭಿಮಾನಿಗಳು ಸೇರಿದಂತೆ ಹಲವರು ನಿವೃತ್ತಿ ಪಡೆಯುವಂತೆ ಸೂಚಿಸುತ್ತಿದ್ದು, ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ರೋಹಿತ್ (Rohit Sharma) ಪಾಲಿಗೆ ನಿರ್ಣಾಯಕ ಎಂದು ಹೇಳಲಾಗಿದೆ. ಮೊದಲ ಪಂದ್ಯದಲ್ಲಿ ತಂಡಕ್ಕೆ 295 ರನ್ಗಳ ಭರ್ಜರಿ ಜಯ ತಂದುಕೊಟ್ಟಿದ್ದ ವೇಗಿ ಬುಮ್ರಾಗೆ ನಾಯಕತ್ವವನ್ನು ನೀಡುವಂತೆ ಆಗ್ರಹ ಕೇಳಿ ಬರುತ್ತಿದ್ದು, ಸರಣಿ ಮುಗಿದ ಬಳಿಕ ಅಂತಿಮ ಚಿತ್ರ ಹೊರಬೀಳಲಿದೆ.