

ನವದೆಹಲಿ: ಟೀಮ್ ಇಂಡಿಯಾದ ಟಾಪ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟಿ20 ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ. ಅಮೆರಿಕ-ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಗೆಲುವಿನ ಬಳಿಕ ನಿವೃತ್ತಿಯ ಘೋಷಣೆಯನ್ನು ಮಾಡಿದರು. ಇನ್ಮುಂದೆ ಕೊಹ್ಲಿ ಅವರು ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತವಾಗಲಿದ್ದಾರೆ.
ವಿಶ್ವಕಪ್ ಗೆದ್ದ ಬೆನ್ನಲ್ಲೇ ಮಾತನಾಡಿದ ಕೊಹ್ಲಿ, ಟಿ20 ಕ್ರಿಕೆಟ್ಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎಂದರು. ಒಂದೆಡೆ ಭಾರತ ಕಿರು ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದರೆ, ಮತ್ತೊಂದೆಡೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸುತ್ತಿದ್ದಂತೆ ಅಭಿಮಾನಿಗಳಿಗೆ ಭಾರಿ ಬೇಸರವಾಯಿತು. ತುಂಬಾ ಫಿಟ್ ಆಗಿರುವ ಕೊಹ್ಲಿ ಮುಂದಿನ ವಿಶ್ವಕಪ್ವರೆಗೂ ಟಿ20ಯಲ್ಲಿ ಮುಂದುವರಿಯುತ್ತಾರೆ ಎಂದು ಎಲ್ಲರು ಬಯಸಿದ್ದರು. ಆದರೆ, ವಿರಾಟ್ ನಿವೃತ್ತಿ ಬೇಸರ ಉಂಟು ಮಾಡಿದೆ. ಇದೀಗ ಕೊಹ್ಲಿ ನಿವೃತ್ತಿ ನಿರ್ಧಾರದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ವ್ಯಂಗ್ಯವಾಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಸ್ಟ್ರೈಕ್ ರೇಟ್ ಟೀಕೆಗಳನ್ನು ತಡೆದುಕೊಳ್ಳಲಾಗದೇ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ ಎಂದು ಬಸಿತ್ ಅಲಿ ಹೇಳಿದ್ದಾರೆ. ವಿರಾಟ್ ನಿವೃತ್ತಿಯ ಕುರಿತು ಬಸಿತ್ ಅಲಿ ಆಡಿರುವ ಮಾತು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಬಾಯಿಯನ್ನು ಹಿಡಿತದಲ್ಲಿಟ್ಟುಕೊಂಡು ಕೊಹ್ಲಿ ಬಗ್ಗೆ ಮಾತನಾಡುವಂತೆ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ.
ಕೊಹ್ಲಿ ಬಗ್ಗೆ ಮಾತನಾಡುವ ಮೊದಲು ಕ್ರಿಕೆಟ್ನ ಮೂರೂ ಮಾದರಿಯಲ್ಲಿ ಕೊಹ್ಲಿ ಏನೆಲ್ಲ ಸಾಧನೆ ಮಾಡಿದ್ದಾರೆ ಎಂಬುದನ್ನು ನೋಡುವಂತೆ ಬಸಿತ್ ಅಲಿಗೆ ನೆಟ್ಟಿಗರು ಸಲಹೆ ನೀಡಿದ್ದಾರೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿಗೆ ವಿರಾಟ್ ಆಡಿದ ಇನ್ನಿಂಗ್ಸ್ ಮಹತ್ವದ್ದಾಗಿದೆ. ಕೊಹ್ಲಿಗೆ ತಂಡದ ಗೆಲುವಿಗಿಂತ ಬೇರೇನೂ ಮುಖ್ಯವಲ್ಲ ಎಂಬುದು ಗೊತ್ತಿರಲಿ ಎಂದು ಕೊಹ್ಲಿಯನ್ನು ಕೊಂಡಾಡಿ, ಬಸಿತ್ ಅಲಿಗೆ ಟಕ್ಕರ್ ಕೊಟ್ಟಿದ್ದಾರೆ.
ಕೊಹ್ಲಿಯನ್ನು ಹೊಗಳಿದ ಬಸಿತ್ ಅಲಿ
ಟಿ20 ಫಾರ್ಮ್ಯಾಟ್ನಲ್ಲಿ ಪವರ್ ಹಿಟ್ಟರ್ಗಳು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ ಎಂದಿರುವ ಬಸಿತ್ ಅಲಿ, ತಾಂತ್ರಿಕವಾಗಿ ಬಲಿಷ್ಠವಾಗಿರುವ ಕೊಹ್ಲಿಯಂತಹ ಬ್ಯಾಟ್ಸ್ಮನ್ಗಳು ತಮ್ಮ ವೃತ್ತಿಜೀವನವನ್ನು ದೀರ್ಘಕಾಲದವರೆಗೆ ವಿಸ್ತರಿಸಬಹುದು. ಕೊಹ್ಲಿ ಅವರ ಬ್ಯಾಟಿಂಗ್ ತಂತ್ರ ಅತ್ಯುತ್ತಮವಾಗಿದೆ. ಆಟದ ಮೇಲಿನ ಸಾಕಷ್ಟು ಸಮರ್ಪಣಾಭಾವವನ್ನು ಅವರು ಹೊಂದಿದ್ದಾರೆ. ಈ ಮಟ್ಟಕ್ಕೆ ಬರಲು ಕೊಹ್ಲಿ ತುಂಬಾ ಕಷ್ಟಪಟ್ಟಿದ್ದಾರೆ. 16 ವರ್ಷಗಳ ಸತತ ಪರಿಶ್ರಮದಿಂದ ಕೊಹ್ಲಿ ಈ ಹಂತಕ್ಕೆ ಬೆಳೆದಿದ್ದಾರೆ ಎಂದು ಬಸಿತ್ ಅಲಿ ಹೊಗಳಿದರು. ಆದರೆ, ನಿವೃತ್ತಿ ವಿಚಾರದಲ್ಲಿ ಬೇಡವಾದ ಕಾಮೆಂಟ್ ಮಾಡಿ, ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ.
ಅಂದಹಾಗೆ ಮುಂದಿನ ತಿಂಗಳು ಬಾಂಗ್ಲಾದೇಶದೊಂದಿಗೆ ಟೆಸ್ಟ್ ಸರಣಿ ಆರಂಭವಾಗಲಿದೆ. ಸದ್ಯ ವಿಶ್ರಾಂತಿ ಮೂಡ್ನಲ್ಲಿರುವ ವಿರಾಟ್ ಕೊಹ್ಲಿ, ತಮ್ಮ ಕುಟುಂಬ ಸಮೇತ ಲಂಡನ್ನಲ್ಲಿ ಸಮಯ ಕಳೆಯುತ್ತಿದ್ದಾರೆ. (ಏಜೆನ್ಸೀಸ್)