ವಿರಾಟ್​​ ಕೊಹ್ಲಿ SSLC ಮಾರ್ಕ್ಸ್​ ಕಾರ್ಡ್ ವೈರಲ್​!​ ರನ್​ ಮೆಷಿನ್​ ಪಡೆದ ಅಂಕ ಎಷ್ಟು? ಗಣಿತದ ಮೇಲೆ ಎಲ್ಲರ ಕಣ್ಣು

Virat Kohli SSLC Marks card
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್ ಮಷಿನ್, ಕ್ರಿಕೆಟ್​ ಕಿಂಗ್ ಹಾಗೂ ದಾಖಲೆಗಳ ಸರದಾರ ಹೀಗೆ ಹಲವು ಬಿರುದುಗಳನ್ನು ಹೊಂದಿರುವ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಕೊಹ್ಲಿ ಹಲವು ಸಂಕಷ್ಟಗಳ ನಂತರ ಕ್ರಿಕೆಟ್​ನಲ್ಲಿ ಯಶಸ್ವಿಯಾಗಿ ಇದೀಗ ಜನಮಾನಸದಲ್ಲಿ ಭದ್ರ ಸ್ಥಾನ ಪಡೆದಿದ್ದಾರೆ. ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವೇ ಇದೆ.

ಕ್ರಿಕೆಟಿಗನಾಗಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವ ಕೊಹ್ಲಿ ಓದಿದ್ದು ಮಾತ್ರ ಕೇವಲ 12ನೇ ತರಗತಿ. ಆ ಬಳಿಕ ಪೂರ್ಣ ಪ್ರಮಾಣದ ಕ್ರಿಕೆಟರ್​ ಆದ ವಿರಾಟ್ ಕೊಹ್ಲಿ ಅಂಡರ್ 19 ವಿಶ್ವಕಪ್​ನಲ್ಲಿ ಭಾರತ ಪರ ಆಡಿದ್ದರು. ಆ ಬಳಿಕ ರಾಷ್ಟ್ರೀಯ ತಂಡ ಸೇರಿಕೊಂಡು ದಾಖಲೆಗಳ ಮಹಾಪೂರವನ್ನೇ ಸೃಷ್ಟಿಸಿದರು. ಈ ಹಿಂದೆ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ 10ನೇ ತರಗತಿಯ ಅಂಕಪಟ್ಟಿ ಹಂಚಿಕೊಂಡಿದ್ದರು. ಇದೀಗ ಆ ಅಂಕಪಟ್ಟಿ ಫೋಟೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಅವರು ಗಣಿತದಲ್ಲಿ ಪಡೆದ ಅಂಕಗಳನ್ನು ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಎಷ್ಟೋ ವಿದ್ಯಾರ್ಥಿಗಳಂತೆ ವಿರಾಟ್​ಗೂ ಕೂಡ ಗಣಿತ ಕಬ್ಬಿಣದ ಕಡಲೆಯಾಗಿದೆ. ಇಂಗ್ಲಿಷ್, ಹಿಂದಿ ಮತ್ತು ಸಾಮಾಜಿಕ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದರೂ, ಗಣಿತ ಮತ್ತು ವಿಜ್ಞಾನದಲ್ಲಿ ಮಾತ್ರ ಕೊಹ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದ್ದಾರೆ.

ಕೊಹ್ಲಿ ಇಂಗ್ಲಿಷ್‌ನಲ್ಲಿ 83, ಹಿಂದಿಯಲ್ಲಿ 75, ಗಣಿತದಲ್ಲಿ 51, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 55, ಸಮಾಜ ವಿಜ್ಞಾನದಲ್ಲಿ 81 ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ 74 ಅಂಕ ಗಳಿಸಿದ್ದಾರೆ. ಅದೇ ಪಟ್ಟಿಯಲ್ಲಿ ಕೊಹ್ಲಿ ಸ್ಪೋರ್ಟ್ಸ್ ಎಂದು ಬರೆದು ಖಾಲಿ ಬಿಟ್ಟಿದ್ದಾರೆ. ನಿಮ್ಮ ಅಂಕಪಟ್ಟಿಯಲ್ಲಿ ಆದ್ಯತೆ ನೀಡದ ವಿಷಯಗಳು ನಿಮ್ಮ ಪಾತ್ರವನ್ನು ನಿರ್ಮಿಸಲು ಹೇಗೆ ಸಹಾಯ ಮಾಡುತ್ತವೆ ಎಂಬುದು ತಮಾಷೆಯಾಗಿದೆ ಎಂದು ಕೊಹ್ಲಿ ಬರೆದುಕೊಂಡಿದ್ದರು.

Virat Markscard

ಪೋಸ್ಟ್‌ ಮಾಡಿದ ತಕ್ಷಣ ಅದನ್ನು ಕೊಹ್ಲಿ ಅಳಿಸಿದ್ದರು. ಆದರೆ ಈ ಫೋಟೋ ಈಗಾಗಲೇ ಎಲ್ಲೆಡೆ ವೈರಲ್ ಆಗಿದ್ದು, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net