ಕಾಂತಾರವನ್ನೂ ಮೀರಿಸುವ ಚಿತ್ರ ತೆಲುಗಿನಲ್ಲಿ ಈ ಹಿಂದೆಯೇ ಬಂದಿದೆಯಂತೆ! ಯಾವುದು ಆ ಸಿನಿಮಾ?

Kantara
Published on

ಕೆಲವು ಚಿತ್ರಗಳು ಯಾವುದೇ ನಿರೀಕ್ಷೆಗಳಿಲ್ಲದೆ ಸಣ್ಣ ಚಿತ್ರಗಳಾಗಿ ಬಂದು ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಸೃಷ್ಟಿಸಿ, ದೊಡ್ಡ ದೊಡ್ಡ ಸಿನಿಮಾಗಳಿಗೂ ಸೆಡ್ಡು ಹೊಡೆಯುತ್ತವೆ. ಅಲ್ಲದೆ, ನಿರ್ಮಾಪಕರಿಗೂ ಅನಿರೀಕ್ಷಿತ ಲಾಭವನ್ನು ತಂದುಕೊಡುತ್ತವೆ. ಕನ್ನಡದಲ್ಲಿ ಮೂಡಿಬಂದ ಕಾಂತಾರ ಚಿತ್ರ ಇದಕ್ಕೆ ಉತ್ತಮ ಉದಾಹರಣೆ. ಪ್ಯಾನ್​ ಇಂಡಿಯಾ ಕಲ್ಪನೆವನ್ನು ಪಕ್ಕಕ್ಕಿಟ್ಟು ಕೇವಲ ಕನ್ನಡಿಗರಿಗೆ ಮಾಡಿದ ಸಿನಿಮಾ ಇದು. ಆದರೆ, ಈ ಚಿತ್ರ ಎಷ್ಟರಮಟ್ಟಿಗೆ ಹಿಟ್ ಆಯಿತು ಅಂದರೆ, ಆನಂತರ ಎಲ್ಲ ಭಾಷೆಗಳಿಗೆ ಡಬ್​ ಆಗಿ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಬಾಕ್ಸ್​ಆಫೀಸ್​ನಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಿತು.

ಈ ಚಿತ್ರವನ್ನು ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಲ್ಲದೆ, ತಾವೇ ನಟಿಸಿದರು. ರಿಷಭ್​ ಅವರ ಅದ್ಭುತ ನಟನೆಗೆ ಇಡೀ ರಾಷ್ಟ್ರವೇ ಬೆರಗಾಯಿತು. ಪ್ರಧಾನಿ ಮೋದಿ ಕೂಡ ಮೆಚ್ಚಿಕೊಂಡರು. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ರಿಷಭ್​ ಶೆಟ್ಟಿ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ಸಿಕ್ಕಿದೆ.

ತಾಜಾ ಸಂಗತಿ ಏನೆಂದರೆ, ತೆಲುಗಿನಲ್ಲೂ ಕಾಂತಾರದಂತ ಸಿನಿಮಾ ಈ ಹಿಂದೆಯೇ ಬಂದಿದೆಯಂತೆ. ಅದಕ್ಕೆ ಉತ್ತರ ‘ಆಕಾಶವಾಣಿ’ ಸಿನಿಮಾವಂತೆ. ನಿರ್ದೇಶಕ ರಾಜಮೌಳಿ ಅವರ ಶಿಷ್ಯ ‘ಆಕಾಶವಾಣಿ’ ಎಂಬ ಕಾಂತಾರ ಶೈಲಿಯ ಸಿನಿಮಾ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ಈ ಚಿತ್ರವು 2021, ಸೆಪ್ಟೆಂಬರ್ 24ರಂದು ಒಟಿಟಿಯಲ್ಲಿ ಬಿಡುಗಡೆಯಾಯಿತು.

Akashavani

ನಾವೀಗ ಆಕಾಶವಾಣಿ ಚಿತ್ರದ ಕತೆ ಏನೆಂದು ನೋಡೋಣ. ಕೆಲವು ಅರಣ್ಯವಾಸಿಗಳು ನಾಗರಿಕ ಪ್ರಪಂಚದಿಂದ ದೂರದ ಕಾಡಿನಲ್ಲಿ ವಾಸಿಸುತ್ತಿರುತ್ತಾರೆ. ಹೊರಗೆ ಇನ್ನೊಂದು ಪ್ರಪಂಚವಿದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಅವರ ಅಸ್ತಿತ್ವವು ಕೂಡ ಹೊರಜಗತ್ತಿಗೆ ಗೊತ್ತಿರುವುದಿಲ್ಲ. ಗುಡ್ಡದ ಜನರೆಲ್ಲ ಡೋರ ಮಾತಿನಂತೆ ವಾಸ ಮಾಡುತ್ತಿರುತ್ತಾರೆ. ಡೋರಾ ಅವರ ಮಾತು ಆ ಜನರಿಗೆ ದೈವಿಕ ಆಜ್ಞೆಯಾಗಿರುತ್ತದೆ. ಆ ಮಹಾನುಭಾವನು ಕೂಡ ಅವನೇ ದೇವರೆಂದು ನಂಬಿ ಅಲ್ಲಿರುವ ಜನರನ್ನು ಕಾಡಿನಿಂದ ಹೊರಗೆ ಹೋಗದಂತೆ ಹೆದರಿಸುತ್ತಾನೆ.

ಇನ್ನು ಆ ಊರಿಗೆ ಬೇರೆ ಊರುಗಳ ಜನ ಬಂದರೆ, ಅವರನ್ನು ಸಂಹರಿಸುತ್ತಾನೆ. ಹೀಗಿರುವಾಗ ಓರ್ವ ಬಾಲಕನಿಗೆ ಒಂದು ರೇಡಿಯೋ ಸಿಗುತ್ತದೆ. ರೇಡಿಯೋ ಎಂದರೇನು? ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದು ಸಹ ಅವರಿಗೆ ತಿಳಿದಿರುವುದಿಲ್ಲ. ಆದರೆ ಆ ರೇಡಿಯೋದಲ್ಲಿ ಬರುವ ಅಶರೀರ ಧ್ವನಿಯನ್ನೇ ದೇವರೆಂದು ನಂಬುತ್ತಾರೆ. ಆ ರೇಡಿಯೋ ಮೂಲಕ ಅಲ್ಲಿನ ಮೂಢನಂಬಿಕೆಗಳನ್ನು ಹೇಗೆ ಕೊನೆಗೊಂಡವು ಎಂಬುದು ಉಳಿದ ಕತೆ.

ಅಂದಹಾಗೆ ಈ ಚಿತ್ರವನ್ನು ರಾಜಮೌಳಿ ಅವರ ಶಿಷ್ಯ ಅಶ್ವಿನ್ ಗಂಗರಾಜು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಬಹುತೇಕ ನಟರು ಹೊಸಬರೇ. ಕಡಿಮೆ ಚಂದಾದಾರರನ್ನು ಹೊಂದಿರುವ ಸೋನಿ ಲಿವ್ ನಂತಹ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ಕೂಡ ಆಕಾಶವಾಣಿ ಯಶಸ್ಸಿಗೆ ಮೈನಸ್ ಆಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net